ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭೆಯ ಅನಾವರಣ ಅವಶ್ಯಕ : ಪ್ರೊ. ಕೆ.ಕೇಶವ ಶರ್ಮ
ಪುತ್ತೂರು : ಪ್ರತಿಭೆ ಪ್ರಭೆಯ ಪ್ರಕಾರ. ಸೂಕ್ತ ಅವಕಾಶಗಳಿದ್ದಲ್ಲಿ ಪ್ರತಿಭಾವಂತರು ಪ್ರಕಾಶಿಸುತ್ತಾರೆ. ಅದನ್ನು ಗುರುತಿಸುವ ಅಗತ್ಯವಿದೆ. ಪ್ರಯತ್ನದಿಂದಲೇ ಪ್ರತಿಭೆ ಸಾಕಾರವಾಗಲು ಸಾಧ್ಯ್ಲ. ಅಲ್ಲದೇ ಸಮಾಜದಲ್ಲಿ ಪ್ರತೀ ಹಂತದಲ್ಲೂ ಸ್ಪರ್ಧೆಯಿದೆ. ಹುಟ್ಟಿನಿಂದಲೇ ಪ್ರತಿಯೊಬ್ಬರೂ ಸ್ಪರ್ಧೆಗೆ ನಿಲ್ಲಬೇಕಾದ ಅವಶ್ಯಕತೆಯಿದೆ. ಇದನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಮುನ್ನಡೆಯಬೇಕು. ಇದಕ್ಕೆ ನಿರಂತರವಾದ ಕಲಿಕೆ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸಾಧಿಸುವ ಛಲವಿರಬೇಕು ಎಂದು ಪೆರ್ಲದ ನಾಲಂದ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಪ್ರೊ.ಕೆ.ಕೇಶವ ಶರ್ಮ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಪಂಚದಲ್ಲಿ ಯಾರೂ ವ್ಯರ್ಥವಲ್ಲ. ಸಾಧಿಸುವ ಛಲವಿದ್ದರೆ ಪ್ರತಿಭೆಯನ್ನು ಗುರುತಿಸುವಲ್ಲಿ ಸಫಲರಾಗಬಹುದು. ಹೊಸ ಅನುಭವಗಳಿಂದ ಪಡೆದ ಜ್ಞಾನವೂ ಪ್ರತಿಭೆಯಾಗುತ್ತದೆ. ಪ್ರತಿಯೊಬ್ಬರ ಅಂತರಂಗದಲ್ಲೂ ಇಂತಹ ಪ್ರತಿಭೆಯಿದೆ . ಅದನ್ನು ಗುರುವಿನ ಮಾರ್ಗದರ್ಶನದಿಂದ ಮಾತ್ರ ಪ್ರತಿಫಲಿಸಲು ಸಾಧ್ಯ. ಮಾತ್ರವಲ್ಲದೇ ಪ್ರತಿಭೆಯು ಕಲೆಯ ಮೂಲಕ ಹೊರಹೊಮ್ಮಬೇಕು. ಇದರಿಂದ ವ್ಯಕ್ತಿತ್ವ ವಿಕಸನವೂ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತವಾದ ಪ್ರತಿಭೆಯಿರುತ್ತದೆ. ಇದನ್ನು ವ್ಯಕ್ತಪಡಿಸುವ ಅಗತ್ಯವಿದೆ. ಪ್ರಯತ್ನದಿಂದ ಮತ್ರ ಇದು ಸಾಧ್ಯ. ನಿರಂತರ ಶ್ರಮ ಮತ್ತು ಕಲಿಕೆ ಸಾಧನೆಗೆ ಪೂರಕ. ಮಾತ್ರವಲ್ಲದೇ ಜೀವನದಲ್ಲಿ ಉನ್ನತಿಗೇರಲು ಶೈಕ್ಷಣಿಕ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನದ ಅಗತ್ಯವಿದೆ. ನಿಜ ಜೀವನದಲ್ಲಿ ಪುರಸ್ಕರ ದೊರೆಯಬೇಕಾದರೆ ಲೋಕಜ್ಞಾನದ ಅಗತ್ಯವಿದೆ ಎಂದು ನುಡಿದರು.
ಶೈಕ್ಷಣಿಕ ವರ್ಷದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿನಿ ಅಶ್ವಿನಿ ಕೃಷ್ಣಮೂರ್ತಿ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕ ಡಾ.ಅರುಣ್ ಪ್ರಕಾಶ್ ಸ್ವಾಗತಿಸಿದರು, ಹಿಂದಿ ವಿಭಾಗ ಉಪನ್ಯಾಸಕಿ ಡಾ. ಆಶಾ ಸಾವಿತ್ರಿ ವಂದಿಸಿದರು, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರಿಪ್ರಸಾದ್.ಎಸ್ ನಿರ್ವಹಿಸಿದರು.