ಅಂತರಿಕ್ಷ ಸಂಶೋಧನೆಗಾಗಿ ರಾಷ್ಟ್ರಗಳು ಒಟ್ಟಾಗಬೇಕು: ಪಿ.ಜೆ. ಭಟ್
ಪುತ್ತೂರು: ಎಲ್ಲಾ ದೇಶಗಳು ಒಟ್ಟಾಗಿ ಅಂತರಿಕ್ಷ ಸಂಶೋಧನೆಗಳನ್ನು ನಡೆಸಬೇಕು. ಪ್ರಸ್ತುತ ಈ ಸಂಶೋಧನೆಗಳನ್ನು ಮಂಗಳ ಗ್ರಹದತ್ತ ಕೇಂದ್ರೀಕರಿಸಬೇಕು. ಏಕೆಂದರೆ ಮಂಗಳ ಗ್ರಹ ಬಹುತೇಕ ಭೂಮಿಯನ್ನೇ ಹೋಲುತ್ತದೆ. ಅದರಲ್ಲಿ ವಾತಾವರಣವೂ ಇದೆ ಎಂದು ಬೆಂಗಳೂರಿನ ಇಸ್ರೋ ಸಂಸ್ಥೆಯ ವಿಶ್ರಾಂತ ಹಿರಿಯ ಶ್ರೇಣಿ ವಿಜ್ಞಾನಿ ಪಿ.ಜೆ. ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ, ವಿವೇಕಾನಂದ ಸೆಂಟರ್ ಫಾರ್ ರಿಸರ್ಚ್ ಸ್ಟಡೀಸ್ (ರಿ) ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಪಂಚಾಂಗಗಳ ವೈಜ್ಞಾನಿಕ ತಳಹದಿ ಎಂಬ ರಾಜ್ಯ ಮಟ್ಟದ ವಿದ್ವತ್ ಸಂವಾದ ಗೋಷ್ಠಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಷ್ಟೋ ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ಮಹಾನದಿಗಳು ಹರಿಯುತ್ತಿದ್ದದ್ದು ಉಪಗ್ರಹಗಳ ಮೂಲಕ ದೃಢ ಪಟ್ಟಿದೆ. ಇಲ್ಲಿನ ನೀರು ಸಂಪೂರ್ಣ ಬತ್ತಿ ಹೋಗಲು ಕಾರಣವೇನು ಎಂಬುದನ್ನು ತೀವ್ರವಾಗಿ ಅಧ್ಯಯನ ಮಾಡಬೇಕಾಗಿದೆ. ಏಕೆಂದರೆ ಇಂತಹ ಪರಿಸ್ಥಿತಿ ಭೂಮಿಯನ್ನು ಆವರಿಸಲು ಹೆಚ್ಚು ಕಾಲ ಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಅಂತರಿಕ್ಷ ಸಂಶೋಧನೆಯಲ್ಲಿ ವಿದೇಶಗಳನ್ನು ಆಶ್ರಯಿಸುವುದನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಬೇಕು. ಉಪಗ್ರಹ ಉಡಾವಣೆಯಲ್ಲಿ ವಿಜ್ಞಾನಿಗಳ ಒಂದು ತಪ್ಪಿನಿಂದ ಸುಮಾರು ೪೫೦ ಕೋಟಿಯಷ್ಟು ಮೊತ್ತದ ಹಣ ನಷ್ಟವಾಗುತ್ತದೆ. ಉಪಗ್ರಹಗಳು ವೈಫಲ್ಯವನ್ನು ಕಂಡರೂ ಅದನ್ನು ವಿಜ್ಞಾನಿಗಳು ದೌರ್ಬಲ್ಯವೆಂದು ಪರಿಗಣಿಸದೆ ಪಾಠವೆಂದು ತಿಳಿಯಬೇಕು, ಇದು ನಿತ್ಯ ಜೀವನಕ್ಕೂ ಅನ್ವಯವೆಂದರು.
ಉಡುಪಿಯ ಶ್ರೀ ವಾದಿರಾಜ ಸಂಶೋಧನನ ಕೇಂದ್ರದ ಸಹಾಯಕ ನಿರ್ದೇಶಕ ಡಾ. ನಿಟಿಲಾಪುರ ಕೃಷ್ಣಮೂರ್ತಿ ಪ್ರಬಂಧ ಮಂಡಿಸಿ ಜೋತಿಷ್ಯಾಸ್ತ್ರ ಕಾಲವಿಜ್ಞಾನ ಶಾಸ್ತ್ರ. ಹಾಗಿರುವಾಗ ವಿದ್ಯಾರ್ಥಿಗಳು ಪಂಚಾಂಗಗಳನ್ನು ತಿಳಿಯುವುದನ್ನು ಕಲಿಯಬೇಕು. ವೈಜ್ಞಾನಿಕವಾದ ಅಥವ ತರ್ಕ ಬದ್ದವಾದ ಜ್ಙಾನವನ್ನು ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಅಳವಡಿಸದರೆ ಅದು ಕಾಲ ವಿಧಾನ ಶಾಸ್ತ್ರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯರ್ಮುಂಜ ಶಂಕರ ಜೋಯಿಸ, ಪಂಡಿತ ನರಸಿಂಹ ಆಚಾರ್ಯ, ಪುರುಷೋತ್ತಮ, ಡಾ. ಎ. ಪಿ ರಾಧಾಕೃಷ್ಣ, ಸತೀಶ ನೆಟ್ಟಾರು, ರಮೇಶ್ ಭಟ್ ಎಂ, ಜಯಂತ್ ಎಚ್, ಎ. ಎನ್ ಸುಬ್ರಹ್ಮಣ್ಯ ಪ್ರಬಂಧ ಮಂಡಿಸಿದರು.
ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಯಂ.ಕೆ. ಶ್ರೀಶ ಕುಮಾರ ಸ್ವಾಗತಿಸಿ, ವಿಭಾಗ ಮುಖ್ಯಸ್ಥೆ ಎಂ. ಉಮಾದೇವಿ ವಂದಿಸಿದರು.