ಪ್ರತಿಯೊಬ್ಬರ ಬದುಕಿನಲ್ಲೂ ಬಾಲ್ಯದ ನೆನಪಿಗೆ ಮಹತ್ವವಿದೆ: ಜಗನ್ನಾಥ
ಪುತ್ತೂರು: ಬಾಲ್ಯದ ನೆನಪು ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವವನ್ನು ಹೊಂದಿವೆ. ಪ್ರಸ್ತುತ ವಿವೇಕಾನಂದ ಕಾಲೇಜು ಬೆಳೆದು ನಿಂತಿರುವ ಪರಿಸರ ಹಿಂದಿನ ಕಾಲದಲ್ಲಿ ದಟ್ಟ ಕಾನನವಾಗಿದ್ದ, ಜನಸಂಚಾರವೇ ವಿರಳವಾಗಿದ್ದ ಪ್ರದೇಶವಾಗಿತ್ತು. ಈಗ ಅದೇ ಪ್ರದೇಶ ಯೋಚನೆಗೆ ನಿಲುಕದಷ್ಟು ಬೆಳವಣಿಗೆಯನ್ನು ಹೊಂದಿದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಕಚೆರಿ ಅಧೀಕ್ಷಕ ಎ ಜಗನ್ನಾಥ ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ವರ್ಷದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸವಿ ನೆನಪು ಎಂಬ ವಿಷಯದ ಕುರಿತಾಗಿ ಗುರುವಾರ ಮಾತನಾಡಿದರು.
ಸಂಸ್ಥೆಯ ದಶಮಾನೋತ್ಸವ ಸಂಭ್ರಮವನ್ನು ಬಲ್ಲ ತಾನು ಸುವರ್ಣ ಮಹೋತ್ಸವದ ನಂತರದ ವರ್ಷದವರೆಗೂ ಕಾರ್ಯನಿರ್ವಹಿಸಿದ್ದೇನೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಲೇಜಿಗೊದಗಿದ ಪರಿಸ್ಥಿತಿಯ ಪ್ರತ್ಯಕ್ಷದರ್ಶಿಯಾಗಿದ್ದೇನೆ. ಕಾಲೇಜು ಕಾರ್ಯ ನಿರ್ವಹಿಸುವುದಕ್ಕೆ ಮೊದಲಿದ್ದ ಸಂದರ್ಭಕ್ಕೂ, ಪ್ರಸ್ತುತ ಸಂದರ್ಭಕ್ಕೂ ಅಜಗಜಾಂತರ ಅಂತರವಿದೆ ಎಂದು ತಿಳಿಸಿದರು.
ಈಗ ಪತ್ರಿಕೋದ್ಯಮದ ಬಗೆಗಿನ ಶಿಕ್ಷಣವು ಜನಮನ್ನಣೆಯನ್ನು ಪಡೆದುಕೊಂಡಿದೆ. ಜನರು ಮಾಧ್ಯಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿನ ಅವಿನಾಭಾವ ಸಂಬಂಧವಿದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮಾತನಾಡುವ ಕಲೆಯನ್ನು ಅಗತ್ಯವಾಗಿ ಸಿದ್ಧಿಸಿಕೊಳ್ಳಬೇಕು. ಅದಕ್ಕಾಗಿ ಈ ಮಣಿಕರ್ಣಿಕ ಮಾತುಗಾರರ ವೇದಿಕೆಯನ್ನು ಬಳಸುಕೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.
ಈ ಸಂದರ್ಭದಲ್ಲಿ ಜಗನ್ನಾಥರನ್ನು ವಿಭಾಗದ ವತಿಯಿಂದ ಗೌರವಿಸಲಾಯಿತು. ಪ್ರಾಧ್ಯಾಪಕರಾದ ಡಾ. ಎಚ್.ಜಿ. ಶ್ರೀಧರ್, ಗಣೇಶ್ ಪ್ರಸಾದ್ ಮತ್ತು ಕಚೇರಿ ಸಿಬ್ಬಂದಿಗಳಾದ ಮುರಳೀಧರ, ಮೋಹನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಕಾರ್ಯಕ್ರಮದ ಕಾರ್ಯದರ್ಶಿ ಭವಿಷ್ಯ ಶೆಟ್ಟಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ವಂದಿಸಿದರು.