VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಬದಲಾವಣೆ ಮಾತ್ರ ಶಾಶ್ವತ: ಪ್ರೊ.ರಾಜಶೇಖರ ಹೆಬ್ಬಾರ್

ಪುತ್ತೂರು: ಶಿಷ್ಯರಿಗೆ ಹೊಸತನವನ್ನು ಕಲಿಯುವ ದಾಹವಿದ್ದರೆ, ಅಧ್ಯಾಪಕರಿಗೆ ವಿದ್ಯಾದಾನ ಮಾಡುವ ಉತ್ಸಾಹವಿರಬೇಕು. ದೈಹಿಕ ಜನ್ಮವನ್ನು ತಂದೆ- ತಾಯಿ ನೀಡಿದರೆ, ಬೌದ್ಧಿಕ ಜನ್ಮವನ್ನು ವಿದ್ಯಾಸಂಸ್ಥೆಗಳು ಅಧ್ಯಾಪಕರ ಮೂಲಕ ನೀಡುತ್ತವೆ. ಅದಕ್ಕಾಗಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರುಗಳಿಗೆ ನೀಡಬೇಕು ಎಂದು ಬೆಳ್ಳಾರೆಯ ಶಿವರಾಮ ಕೇಂದ್ರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜ್‌ಶೇಖರ್ ಹೆಬ್ಬಾರ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ವಿಭಾಗ ಆಯೋಜಿಸಿದ ವಿಭಾಗದ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬುಧವಾರ ಮಾತನಾಡಿದರು.

IMG_8038

ಪ್ರಪಂಚದಲ್ಲಿ ಎಲ್ಲವೂ ನಶ್ವರವಾದರೆ ಬದಲಾವಣೆ ಮಾತ್ರ ಶಾಶ್ವತ. ಆ ಬದಲಾವಣೆಗೆ ಒಗ್ಗಿಕೊಳ್ಳುವ ಮನೋಸ್ಥಿತಿಯನ್ನು ಬೆಳೆಸಬೇಕು. ಅದಕ್ಕಾಗಿ ಅವಕಾಶಗಳನ್ನು ಬಾಚಿಕೊಳ್ಳಬೇಕು. ಮಾತ್ರವಲ್ಲದೇ ವಿದ್ಯಾರ್ಥಿಗಳು ಮಹತ್ತರವಾದ ಕನಸನ್ನು ಕಟ್ಟಿಕೊಳ್ಳಬೇಕು. ಜತೆಗೆ ಕಟ್ಟಿಕೊಂಡ ಕನಸನ್ನು ಸಾಕಾರಗೊಳಿಸಿದರೆ ಸಾಲದು. ಅದನ್ನು ಮೀರಿ ಮುನ್ನಡೆಯಬೇಕು ಎಂದು ತಿಳಿಸಿದರು.

ಮಾತಪಿತರು ಹಾಗೂ ಗುರುಗಳು ಮಾತ್ರ ಕಿರಿಯರ ಸಾಧನೆಯನ್ನು ಬೆಂಬಲಿಸುತ್ತಾರೆ, ಸಹಕರಿಸುತ್ತಾರೆ. ಇವರಿಬ್ಬರನ್ನು ಬಿಟ್ಟು ಉಳಿದ ಎಲ್ಲಾ ವರ್ಗದವರುಗಳು ಬೇರೆಯವರ ಉನ್ನತಿಯನ್ನು ಬಯಸುವುದಿಲ್ಲ. ಈ ತೆರೆನಾದ ವಾಸ್ತವಿಕ ಸತ್ಯಗಳನ್ನು ಅರಿತುಕೊಳ್ಳಬೇಕು ಎಂದರು.

೨೦೧೪-೧೫ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅಭಿನಂದಿಸಿ, ಇತಿಹಾಸದ ಪುಟಗಳಲ್ಲಿಯೂ ವಾಣಿಜ್ಯ- ವ್ಯವಹಾರಗಳ ಪಾತ್ರ ಪ್ರಬಲವಾದದ್ದು. ಅಷ್ಟೇ ಅಲ್ಲದೆ ಬೇಡದ ಚಿಂತನೆಗಳಿಂದ ದೂರ ಸರಿದು ಜ್ಞಾನವನ್ನು ಸಂಪಾದಿಸುವಂತವರಾಗಬೇಕು ಎಂದು ಕಿವಿಮಾತು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಪೈ ಪಿ. ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವುದು ವಿದ್ಯಾಸಂಸ್ಥೆಯ ಆದ್ಯ ಕರ್ತವ್ಯ. ಅಂದಿನ ದಿನಗಳಲ್ಲಿ ವಿಜ್ಞಾನಕ್ಕೆ ಸಿಕ್ಕ ಮಾನ್ಯತೆ ಇಂದು ವಾಣಿಜ್ಯ- ವ್ಯವಹಾರ ವಿಷಯಕ್ಕೆ ಸಿಕ್ಕಿದೆ. ಇದಕ್ಕೆ ಕಾರಣ ದೇಶದ ಆರ್ಥಿಕತೆಯಲ್ಲಿ ವಾಣಿಜ್ಯ ವ್ಯವಹಾರಗಳ ಪಾತ್ರ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ ಎಂದರು.

ಹಿರಿಯ ವಿದ್ಯಾರ್ಥಿನಿ ವೈಷ್ಣವಿ ನಾಯಕ್ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ವ್ಯವಹಾರ ನಿರ್ವಹಣಾ ವಿಭಾಗ ಮುಖ್ಯಸ್ಥ ಪ್ರೊ. ವಿ. ಆನಂದ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟ್ರಮಣ ಭಟ್ ಪ್ರಸ್ತಾವಿಸಿದರು. ವಾಣಿಜ್ಯ ಸಂಘದ ಜೊತೆ ಕಾರ್ಯದರ್ಶಿ ವೈಶಾಲಿ ಸ್ವಾಗತಿಸಿ, ಉಪಾಧ್ಯಕ್ಷ ಅತುಲ್ ಕಶಪ್ ವಂದಿಸಿದರು. ಉಪನ್ಯಾಸಕಿ ರವಿಕಲಾ ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಆಶ್ರಿತ ನಿರೂಪಿಸಿದರು.