ಕಯ್ಯಾರರ ಬದುಕು- ಬರಹ ಬೇರೆ ಸಂಗತಿಯಲ್ಲ: ಡಾ.ಧನಂಜಯ ಕುಂಬ್ಳೆ
ಪುತ್ತೂರು: ಕವಿ ಕಯ್ಯಾರರು ನಮ್ಮ ಕಾಲದ ಬಹಳ ದೊಡ್ಡ ಸಾಹಿತ್ಯ ದಿಗ್ಗಜ. ಕಯ್ಯಾರರ ಬದುಕು- ಬರಹ ಬೇರೆ ಬೇರೆ ಸಂಗತಿಯಲ್ಲ. ಅವರಿಗೆ ಬದುಕು ಮತ್ತು ಬರವಣಿಗೆ ಅಭಿನ್ನವಾದ ಕ್ರಿಯೆ. ನಾವು ಭಾವನೆಯನ್ನು ಕಳೆದುಕೊಂಡರೆ ಸರ್ವವೂ ಶೂನ್ಯ ಎಂದು ಭಾವಿಸಿದ್ದವರು ಕಯ್ಯಾರರು ಎಂದು ಮಂಗಳೂರು ವಿಶ್ವವಿದ್ಯಾನಿಯದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಯ್ಯಾರ ಕಿಞ್ಞಣ್ಣ ರೈ: ಬದುಕು-ಬರಹ ಎಂಬ ವಿಷಯದ ಕುರಿತು ಸಂಸ್ಮರಣಾ ಉಪನ್ಯಾಸ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಿಕೋದ್ಯಮಿಯಾಗಿ, ಕವಿಯಾಗಿ, ಶಿಕ್ಷಕರಾಗಿ, ಪಂಚಾಯತ್ನ ಅಧ್ಯಕ್ಷರಾಗಿ, ಹೀಗೆ ಬಹು ಕ್ಷೇತ್ರಗಳಲ್ಲಿ ಕಯ್ಯಾರರು ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಭಾರತೀಯ ಚಿಂತನಾ ಕ್ರಮವನ್ನು ಅವರು ಹೊಂದಿದ್ದರು ಎಂಬುದು ಮುಖ್ಯ ಸಂಗತಿ. ಐಕ್ಯತೆಗಾಗಿ ಹೋರಾಡಬೇಕು ಎಂಬುದು ಅವರ ಆಶಯವಾಗಿತ್ತು. ಜಾತಿಯತೆ ನಿರ್ಮೂಲನೆಯಾಗಬೇಕು ಎಂಬುದು ಅವರ ಕನಸಾಗಿತ್ತು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ರೈತನಾಗಿ, ಪತ್ರಕರ್ತನಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ ಹೀಗೆ ಬದುಕಿನಲ್ಲಿ ಸಾಧನೆ ಮಾಡಿದವರು ಕಯ್ಯಾರರು. ನಾವು ಕಯ್ಯಾರರ ಕನಸನ್ನು ನನಸು ಮಾಡುವ ಕೆಲಸ ಮಾಡಬೇಕು. ಅದಕ್ಕಾಗಿ ಚಿಂತನೆಮಾಡಬೇಕು. ಭಾಷೆಯ ಮೇಲೆ ಅಭಿಮಾನಬೇಕು. ಆದರೆ ನಾವು ಒಂದೇ ಭಾಷೆಗೆ ಸೀಮಿತವಾಗಿರಬಾರದು, ಎಲ್ಲಾ ಭಾಷೆಯ ಪಾಂಡಿತ್ಯವನ್ನು ಹೊಂದಿರುವುದು ಉತ್ತಮ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ಸ್ವಾಗತಿಸಿದರು. ಉಪನ್ಯಾಸಕಿ ಡಾ. ಗೀತಾ ಕುಮಾರಿ ವಂದಿಸಿದರು. ವಿದ್ಯಾರ್ಥಿ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.