ಬರವಣಿಗೆ ಒಂದು ತಪಸ್ಸು: ಡಾ. ಮನಮೋಹನ ಎಂ
ಪುತ್ತೂರು: ಈಜು ಕಲಿಕೆಯ ಬಗೆಗೆ ಬಾಯಲ್ಲಿ ಹೇಳುವುದು ಸುಲಭ. ಅದರ ಬಗೆಗೆ ಗಂಟೆಗಟ್ಟಳೆ ಕಾಲ ಪಾಠಮಾಡಬಹುದು. ಆದರೆ ಅದರ ಪ್ರಾಯೋಗಿಕ ಅನುಭವ ನೀರಿನಲ್ಲಿ ಮುಳುಗಿದಾಗ ಮಾತ್ರ ದೊರಕಲು ಸಾಧ್ಯ. ಅಂತೆಯೇ ಬರವಣಿಗೆಯೂ ಪ್ರಾಯೋಗಿಕವಾಗಿ ತೊಡಗಿದಾಗ ಮಾತ್ರ ಒಲಿಯುವಂತಹದ್ದು ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ. ತಿಳಿಸಿದರು.
ಅವರು ಬುಧವಾರ ಕಾಲೇಜಿನಲ್ಲಿ ಜಾಗೃತಿ ಭಿತ್ತಿಪತ್ರಿಕೆ ಹಾಗೂ ಲಿಟರರಿ ಕ್ಲಬ್‌ನ ವತಿಯಿಂದ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಿತ್ತಿಪತ್ರಿಕೆಗಳ ಮಹತ್ವ ಎಂಬ ವಿಷಯದ ಬಗೆಗೆ ಮಾತನಾಡಿದರು.
ಬರಹಗಾರನಿಗಿರುವ ಬಹು ದೊಡ್ಡ ವೈರಿ ಎಂದರೆ ಭಯ. ನಾವು ಬರೆದ ಲೇಖನಗಳನ್ನು ಬೇರೆಯವರಿಗೆ ತೋರಿಸಲು ಭಯಪಡುತ್ತೇವೆ. ಅನೇಕ ಸಂದರ್ಭಗಳಲ್ಲಿ ಬೇರೆಯವರು ಏನು ಹೇಳುತ್ತಾರೊ ಎಂದು ಹೆದರಿ ಬರೆಯುವುದೇ ಇಲ್ಲ. ನಾವು ಅಂತಹ ಭಯವನ್ನು ಮೀರಿ ನಿಲ್ಲಬೇಕು. ಆಗ ಮಾತ್ರ ನಾವು ಉತ್ತಮ ಬರಹಗಾರರಾಗಲು ಸಾಧ್ಯ ಎಂದು ತಿಳಿಸಿದರು.
ಭಿತ್ತಿ ಪತ್ರಿಕೆ ಒಂದು ರೀತಿ ಕ್ರಿಯಾಶೀಲತೆಯನ್ನು ಹೊಂದಿದೆ. ಬರವಣಿಗೆಯನ್ನು ಉತ್ತಮವಾಗಿ ರೂಪಿಸಲು ಸಾಧ್ಯ. ಅದೊಂದು ತಪಸ್ಸಿನಂತೆ. ಅದಕ್ಕೆ ಏಕಾಗ್ರತೆ, ತಾಳ್ಮೆ, ತಲ್ಲೀನತೆ, ಲಕ್ಷ್ಯಗಳ ಅಗತ್ಯತೆ ಇದೆ. ಅಂತೆಯೇ ನಾವು ಯಾವುದೇ ಪುಸ್ತಕವನ್ನೋ ಇನ್ನಾವುದೋ ಲೇಖನವನ್ನು ನೋಡಿ ಅದರಂತೆ ಬರೆಯಲು ಹೋಗಬಾರದು. ನಮಗೆ ಅನುಕರಣೆ ಬೇಡ, ಅನುಸರಣೆ ಅಗತ್ಯ ಎಂದರು.
ನಾವು ಲೇಖನವನ್ನು ಒಂದು ಬಾರಿ ಬರೆದು ಬಿಟ್ಟುಬಿಡುತ್ತೇವೆ. ಬದಲಾಗಿ ನಿರಂತರವಾಗಿ ಬರೆಯಬೇಕು. ಅದರಿಂದ ನಮ್ಮ ಬರವಣಿಗೆ ಅಭಿವೃದ್ಧಿಯಾಗುತ್ತದೆ. ಅದರೊಂದಿಗೆ ನಮ್ಮ ಬರವಣಿಗೆ ನಮ್ಮ ಸಮಾಜದ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ. ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಗೃತಿ ಭಿತ್ತಿಪತ್ರಿಕೆಯ ನಿರ್ದೇಶಕಿ ಮೋತಿ ಬಾ ಅಧ್ಯಕ್ಷತೆ ವಹಿಸಿದ್ದರು. ಜಾಗೃತಿ ಭಿತ್ತಿಪತ್ರಿಕೆಯ ಸಂಪಾದಕಿ ಹಾಗೂ ಅಧ್ಯಕ್ಷೆ ದಿವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದಾರ್ಥಿನಿ ಸುಕನ್ಯ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿನಿ ಶಿಲ್ಪಶ್ರೀ ವಂದಿಸಿದರು.