ವಿವೇಕಾನಂದ ಕಾಲೇಜಿನಲ್ಲಿ ಪ್ರೊ.ಎಸ್.ಐ.ಭಟ್ಗೆ ಬೀಳ್ಕೊಡುಗೆ
ಪುತ್ತೂರು: ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗ ಕ್ಷೇತ್ರದ ಬಯಕೆ ಹಾಗೂ ಶಿಕ್ಷಣ ಸಂಸ್ಥೆಗಳ ಪೂರೈಕೆ ನಡುವೆ ಸಾಕಷ್ಟು ವ್ಯತ್ಯಯಗಳು ಕಂಡುಬರುತ್ತಿದೆ. ವಿದ್ಯಾ ಸಂಸ್ಥೆಗಳು ರೂಪಿಸುತ್ತಿರುವ ವಿದ್ಯಾರ್ಥಿಗಳು ಔದ್ಯೋಗಿಕ ಕ್ಷೇತ್ರಕ್ಕೆ ಸರಿಹೊಂದುತ್ತಿಲ್ಲ. ಈ ಅಂಶಗಳನ್ನು ಗಮನದಲ್ಲಿರಿಸಿಯೇ ವಿವೇಕಾನಂದ ಕಾಲೇಜಿನ ಎಂ.ಕಾಂ ವಿಭಾಗ ಕಾರ್ಯನಿರ್ವಹಿಸುತ್ತಿದೆ. ತನ್ಮೂಲಕ ಉದ್ಯೋಗದಾತರ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಯತ್ನಗಳು ನಡೆಯುತ್ತಿವೆ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ.ಎಸ್.ಈಶ್ವರ ಭಟ್ ಹೇಳಿದರು.
ಅವರು ಬುಧವಾರ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಮ್ಯಾನೇಜ್ಮೆಂಟ್ ಕ್ಲಬ್ಗಳು ಸಂಯುಕ್ತವಾಗಿ ತನಗೆ ನೀಡಿದ ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದರು.
ತಾನು ವಿವೇಕಾನಂದ ಕಾಲೇಜಿಗೆ ಪ್ರಾಧ್ಯಾಪಕನಾಗಿ ಬಂದದ್ದು ಒಂದು ವಿಶೇಷ ಸನ್ನಿವೇಶದಲ್ಲಿ. ಪದವಿ ಕಾಲೇಜೊಂದರಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ಬೋಧಿಸಿ ನಿವೃತ್ತನಾಗಿದ್ದ ತಾನು ವಿವೇಕಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ಜವಾಬ್ಧಾರಿಯನ್ನು ಸ್ವೀಕರಿಸಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪಾಠ ಪ್ರವಚನಗಳ ನಡುವೆ ಅನೇಕ ವ್ಯತ್ಯಾಸಗಳಿವೆ ಎಂದರಲ್ಲದೆ ವಿದ್ಯಾರ್ಥಿಗಳಿಂತ ನಾನು ತುಂಬಾ ಕಲಿತುಕೊಂಡಿದ್ದೇನೆ. ನನ್ನ ನಿಜವಾದ ಆಸ್ತಿಯೇ ವಿದ್ಯಾರ್ಥಿಗಳು. ಎಂದು ನುಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಯಾವುದೇ ವ್ಯವಸ್ಥೆಯಲ್ಲಿ ಅಡಿಪಾಯ ಅತ್ಯಂತ ಮುಖ್ಯವಾದದ್ದು. ಅದು ದೃಢವಾಗಿದ್ದಲ್ಲಿ ಮಾತ್ರ ಭವಿಷ್ಯ ಉತ್ತಮವಾಗಿ ಮೂಡಿಬರಲು ಸಾಧ್ಯ. ಅಂತೆಯೇ ಕಾಲೇಜಿನ ಎಂ.ಕಾಂ ವಿಭಾಗದ ಆರಂಭಿಕ ಅಡಿಪಾಯವನ್ನು ರೂಪಿಸುವಲ್ಲಿ ಪ್ರೊ.ಎಸ್.ಐ.ಭಟ್ ಅವರ ಪಾತ್ರ ಬಹಳ ದೊಡ್ಡದು. ಅವರು ತನ್ನ ಜವಾಬ್ಧಾರಿಯನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿದವರು ಎಂದು ಬಣ್ಣಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ, ಪ್ರೊ.ಭಟ್ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದ ವಿಶೇಷ ಪ್ರಾಧ್ಯಾಪಕ. ಅವರ ಬಗೆಗಿನ ವಿದ್ಯಾರ್ಥಿಗಳ ಅನಿಸಿಕೆಯನ್ನು ಕೇಳುವಾಗ ಅವರ ವ್ಯಕ್ತಿತ್ವ ಎಷ್ಟು ಹಿರಿದಾದುದು ಎಂಬುದು ಅರ್ಥವಾಗುತ್ತದೆ ಎಂದು ನುಡಿದರು.
ವಿವೇಕಾನಂದ ವಿದ್ಯಾವರ್ದಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಅಧ್ಯಕ್ಷೀಯ ಭಾಷಣ ಮಾಡಿ ಪ್ರೊ.ಎಸ್.ಐ.ಭಟ್ ಫಿಲೋಮಿನಾ ಕಾಲೇಜಿನಲ್ಲಿ ಅತ್ಯುತ್ತಮವಾದ ವಾಣಿಜ್ಯ ವಿಭಾಗವನ್ನು ರೂಪಿಸಿದವರಲ್ಲಿ ಒಬ್ಬರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಕೃಷಿಯಲ್ಲೂ ಅವರಿಗೆ ವಿಶೇಷ ಆಸಕ್ತಿ. ಆದ್ದರಿಂದಲೇ ಅವರು ಉತ್ತಮ ಪ್ರಾಧ್ಯಾಪಕನೂ ಹೌದು, ಶ್ರೇಷ್ಟ ಕೃಷಿಕನೂ ಹೌದು ಎಂದು ಅಭಿಪ್ರಾಯಪಟ್ಟರು.
ದ್ವಿತೀಯ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳಾದ ರೇಷ್ಮಾ, ಶಿವಪ್ರಸಾದ್, ಪ್ರಶಾಂತಿ ಅಂತೆಯೇ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಉಷಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪ್ರೊ.ಎಸ್.ಐ.ಭಟ್ ಕಾಲೇಜಿನಲ್ಲಿ ದತ್ತಿನಿಧಿ ಸ್ಥಾಪನೆಗಾಗಿ ಕಾಲೇಜಿನ ಸಂಚಾಲಕರಿಗೆ ಚೆಕ್ ಅನ್ನು ಹಸ್ತಾಂತರಿಸಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ನೂತನ ಸಂಯೋಜಕಿ ವಿಜಯ ಸರಸ್ವತಿ ಸ್ವಾಗತಿಸಿದರು. ಉಪನ್ಯಾಸಕಿ ಅನನ್ಯಾ ವಿ ವಂದಿಸಿ, ಉಪನ್ಯಾಸಕಿ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು.