VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿಗೆ ವರಕವಿ ದ.ರಾ.ಬೇಂದ್ರೆ ಭೇಟಿ – ಒಂದು ಗಂಟೆಯಷ್ಟು ಕಾಲ ಬೇಂದ್ರೆ ಭಾಷಣ ಸವಿದ ಪ್ರೇಕ್ಷಕರು

ಪುತ್ತೂರು: ಗುರುವಾರ ಮಧ್ಯಾಹ್ನ ಸುಮಾರು ೧೨ರ ಹೊತ್ತಿಗೆ ಇಲ್ಲಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಒಮ್ಮಿಂದೊಮ್ಮೆಗೇ ಅಚ್ಚರಿ. ಕೆಲವು ವಿದ್ಯಾರ್ಥಿಗಳು ’ಏ ಇವರ ಫೋಟೋವೇ ಅಲ್ವಾ ಅಲ್ಲಿ ಕನ್ನಡ ವಿಭಾಗದಲ್ಲಿ ಹಾಕಿರೋದು’ ಅಂತ ಮಾತಾಡಲು ತೊಡಗಿದರೆ ಮತ್ತೆ ಕೆಲವರು ’ಹೇ ಇವ್ರು ದ.ರಾ.ಬೇಂದ್ರೆ ಕಣೋ’ ಅಂತ ಪಿಸುಗುಟ್ಟಲು ಆರಂಭಿಸಿದರು. ಆಗಲೇ ’ಅದ್ಹೇಗೆ, ಅವ್ರು ತೀರಿ ಹೋಗಿ ವರ್ಷ ಎಷ್ಟಾಯ್ತು ಗೊತ್ತಾ?’ ಎಂಬ ಧ್ವನಿ. ಬಂದ ವ್ಯಕ್ತಿಯ ಹಿಂದೆ ಮುಂದೆ ಸುಳಿಯಲು ಆರಂಭ. ಕೊನೆಗೆ ಕಾಲೇಜಿನ ಅಧ್ಯಾಪಕರು ಸೇರಿ ಆ ವ್ಯಕ್ತಿಯನ್ನು ವಿದ್ಯಾರ್ಥಿಗಳೆಡೆಯಿಂದ ’ಸುರಕ್ಷಿತ’ವಾಗಿ ಕೊಠಡಿಯೊಂದಕ್ಕೆ ಕರೆದೊಯ್ದರು.

Bendre 2

ಹೌದು, ಧಾರವಾಡದ ಸಾಧನಕೇರಿಯಲ್ಲಿ ಇನ್ನಿಲ್ಲದ ಸಾಧನೆಯನ್ನು ಸಾಕಾರಗೊಳಿಸಿದ ವರ ಕವಿ ಬೇಂದ್ರೆ ಗುರುವಾರ ವಿವೇಕಾನಂದ ಕಾಲೇಜಿನ ಕಾರಿಡಾರಿನಲ್ಲಿ ಅಡ್ಡಾಡುತ್ತಿದ್ದರು. ಹಾಂ, ನಿಮಗೆ ಅಚ್ಚರಿಯಾಗಿಯೇ ಆಗುತ್ತದೆ. ’ಬೇಂದ್ರೆ ಈಗ… ಹೇಗೆ?’ ಎಂಬಿತ್ಯಾದಿ ಪ್ರಶ್ನೆ ಮೂಡದಿರದು. ನಿಮ್ಮ ಅಚ್ಚರಿ ಸಹಜವೇ. ನಿಜ, ಬಂದವರು ಬೇಂದ್ರೆಯಲ್ಲ, ಅವರನ್ನೇ ಹೋಲುವಂತೆ ಕಾಣುವ ವೇಷಧಾರಿ

Bendre 1.

ಇವರ ಹೆಸರು ಅನಂತ್ ಕೆ ದೇಶಪಾಂಡೆ. ಇವರ ಊರೂ ಧಾರವಾಡವೇ. ವೃತ್ತಿಯಲ್ಲಿ ಸಿನೆಮಾ, ನಾಟಕ ನಿರ್ದೇಶಕ. ಇವರು ತಯಾರಿಸಿದ ಸಿನೆಮಾಗಳು ಅನೇಕ. ಸಿಂಗಾರವ್ವ, ಐಡಿಯಾ ಮಾಡ್ತಾರೆ, ಕತ್ತಲೆಯಿಂದ ಬೆಳಕಿನೆಡೆಗೆ, ಕೂರ್ಮಾವತಾರ, ರಮ್ಯಚೈತ್ರ ಕಾಲ, ಆತ್ಮಕಥೆ ಹೀಗೆ ಸಿನೆಮಾಗಳ ಪಟ್ಟಿ ಮುಂದುವರೆಯುತ್ತದೆ. ಕೂರ್ಮಾವತಾರ ಚಿತ್ರಕ್ಕೆ ಕಾಸರವಳ್ಳಿ ಅವಾರ್ಡ್ ಸಿಕ್ಕರೆ, ಕತ್ತಲೆಯಿಂದ ಬೆಳಕಿನೆಡೆ ಸಿನೆಮಾಕ್ಕೆ ಸ್ವರ್ಣಕಮಲ ದೊರಕಿದೆ.

ಇವರೊಬ್ಬ ಬೇಂದ್ರೆಯವರ ಕಟ್ಟಾ ಅಭಿಮಾನಿ. ಹೀಗೆ ಅಭಿಮಾನ ಬೆಳೆಯುವುದಕ್ಕೆ ಕಾರಣವೂ ಇದೆ. ಇವರು ಎಂಟನೆಯ ವರ್ಷದ ಹುಡುಗನಾಗಿದ್ದಾಗ ಬೇಂದ್ರೆಯವರ ಜಾತ್ರೆ ನಾಟಕವನ್ನು ನಿರ್ದೇಶಿಸಿ, ನಟಿಸಿ ಸ್ವತಃ ಬೇಂದ್ರೆಯವರಿಂದಲೇ ಮೆಚ್ಚುಗೆ ಪಡೆದಿದ್ದರಂತೆ. ಅಲ್ಲಿಂದ ಬೇಂದ್ರೆ ಎಂದರೆ ಇವರಿಗಿಷ್ಟ. ಹಾಗಾಗಿ ಕಳೆದ ಇಪ್ಪತ್ತೈದು ವರ್ಷಗಳಿದ ಬೇಂದ್ರೆಯವರಂತೆ ವೇಷ ಧರಿಸುವ, ಬೇಂದ್ರೆಯವರದೇ ಭಾಷಣವನ್ನು ಗಂಟೆಗಟ್ಟಳೆ ಅವರಂತೆಯೇ ಪ್ರಸ್ತುತಪಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂದ್ರಪ್ರದೇಶಗಳಲ್ಲೂ ವಿವಿಧ ’ಬೇಂದ್ರೆ  ಕಾರ್ಯಕ್ರಮ’ ನೀಡಿದ್ದಾರೆ. ಈವರೆಗೆ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಬಾರಿ ಬೇಂದ್ರೆ ಭಾಷಣ ಹಾಗೂ ವೇಷವನ್ನು ಪ್ರಸ್ತುತ ಪಡಿಸಿರುವ ಇವರಿಗೆ ಆ ಕಾರ್ಯದಲ್ಲಿ ಅಪಾರ ಪ್ರೀತಿಯಿದೆ. ಧಾರವಾಡದ ಬೇಂದ್ರೆ ಟ್ರಸ್ಟ್ ನಡೆಸುವ ವಿವಿಧ ಕಾರ್ಯಕ್ರಮಗಳಲ್ಲಿ ಇವರ ಬೇಂದ್ರೆ ಪ್ರಸ್ತುತಿಯೂ ಸೇರಿರುವುದು ಸಹಜವಾಗಿ ನಡೆದು ಬಂದಿದೆ.

ಹೀಗಾಗಿ ವಿವೇಕಾನಂದ ಕಾಲೇಜಿನಲ್ಲಿ ಗುರುವಾರ ಬೇಂದ್ರೆ ಟ್ರಸ್ಟ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾದ ದ.ರಾ.ಬೇಂದ್ರೆ ಕಾವ್ಯಾನುಭವ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನಂತ್ ದೇಶಪಾಂಡೆ ಆಗಮಿಸಿದ್ದರು. ಸದ್ಯ ಅರವತ್ತರ ಹರಯದ ಈ ಕಲಾವಿದ ಪ್ರಸ್ತುತ ಪಡಿಸುವ ’ಬೇಂದ್ರೆ ಭಾಷಣ’ ನಿಜಕ್ಕೂ ವಿಸ್ಮಯಕಾರಿ. ನಿಮಗೂ ಆಸಕ್ತಿಯಿದ್ದರೆ ಜುಲೈ ೨೯ಕ್ಕೆ ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ನೆಲ್ಯಾಡಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜುಗಳಲ್ಲಿ ನಡೆಯಲಿರುವ ಬೇಂದ್ರೆ ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಹಾಂ, ಆಗ ಬೇಂದ್ರೆ ಭಾಷಣ ಕೇಳಬಹುದು!!