VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಭಾರತದ ಸವಾಲುಗಳಿಗೆ ವಿವೇಕಾನಂದರ ಚಿಂತನೆಗಳು ಉತ್ತರ: ಸದಾನಂದ ಗೌಡ

ಪುತ್ತೂರು: ಪಾಶ್ಚಿಮಾತ್ಯ ರಾಷ್ಟ್ರಗಳು ಆದರ್ಶವಾಗುತ್ತಿರುವ ಹೊತ್ತಿನಲ್ಲಿ, ಪರಕೀಯ ಸಂಸ್ಕಾರಗಳು ಮಾದರಿಯಾಗುತ್ತಿರುವ ಈ ಸಂದರ್ಭದಲ್ಲಿ ಜನರ ಅಂತಃಕರಣವನ್ನು ತಲುಪಿ ದೇಸೀಯ ಚಿಂತನೆಯೆಡೆಗೆ ಸೆಳೆದೊಯ್ಯಬಲ್ಲ, ನಮ್ಮ ಪರಂಪರೆಯ ಶ್ರೇಷ್ಟತೆಯನ್ನು ಸಾರಿ ಹೇಳಬಲ್ಲ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಸಮಾಜದ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

       ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ ಆಶ್ರಯದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದ ಶ್ರೀ ರಾಮಕೃಷ್ಣ ಪರಮಹಂಸ ಬಯಲು ರಂಗಮಂದಿರದಲ್ಲಿ ನಡೆದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆಯ ಸಮಾರೋಪ ಹಾಗೂ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

       ಭಾರತ ದೇಶದಲ್ಲಿ ಆದರ್ಶಗಳಿಗೆ ಕೊರತೆಯಿಲ್ಲ, ಆಚಾರ ವಿಚಾರ ಸಂಸ್ಕೃತಿಯನ್ನು ಒಗ್ಗೂಡಿಸುವ ಚಿಂತನೆಗಳಿಗೂ ಕೊರತೆಯಿಲ್ಲ. ಆದರೆ ಅಂತಹ ಶ್ರೇಷ್ಟ ಚಿಂತನೆಗಳನ್ನು ಆಚರಣೆಗೆ ತರುವ ಕೃತ್ ಶಕ್ತಿ ಇಂದಿನ ದಿವಸಗಳಲ್ಲಿ ಕ್ಷೀಣಿಸುತ್ತಿದೆ. ದೇಶೀಯ ವಿಚಾರಗಳನ್ನು ಆದರಿಸುವ ಗುಣಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕ್ಷೀಣಿಸುತ್ತಾ ಬಂದಿರುವುದು ಅತ್ಯಂತ ಬೇಸರದ ಸಂಗತಿ. ನಿಜವಾಗಿಯೂ ದೇಶದ ಬಗ್ಗೆ ಯೋಚಿಸಲೇಬೇಕಾದ ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

       ಇಂದು ಭಾರತ ದೇಶವನ್ನು ಕಾಡುತ್ತಿರುವ ವಿವಿಧ ಆಂತರಿಕ ಮತ್ತು ಬಾಹ್ಯ ಸಮಸ್ಯೆ ಸವಾಲುಗಳಿಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಪರಿಹಾರಗಳಾಗಿ ಕಾಣಿಸಿಕೊಳ್ಳುತ್ತವೆ. ದೇಶವನ್ನು ನಾಯಕತ್ವದ ಕೊರತೆ ಕಾಡುತ್ತಿರುವ ಹೊತ್ತಿನಲ್ಲಿ, ಪುರುಷಸಿಂಹರನ್ನು ಸೃಷ್ಟಿಸುವ ವಿವೇಕಾನಂದರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಯೌವನ ಅತ್ಯಂತ ಉತ್ತಮ ಕಾಲಘಟ್ಟ. ಈ ಸಮಯದಲ್ಲಿ ಪ್ರತಿಯೊಬ್ಬರೂ ಸಾಧನೆಯ ಉತ್ತುಂಗದೆಡೆಗೆ ಹೆಜ್ಜೆಯಿಡಬೇಕು ಎಂದು ನುಡಿದರು.

       ಆಶೀರ್ವಚನ ನೀಡಿದ ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸ್ವಾಮಿ ವಿವೇಕಾನಂದರು ಈ ದೇಶದ ಐತಿಹಾಸಿಕ ಆಸ್ತಿ. ನಾಡಿನ ನಾಡಿ ನಾಡಿಗಳಲ್ಲಿ ಹೇಡಿತನ ತುಂಬಿರುವ ಸಂದರ್ಭದಲ್ಲಿ ವಿವೇಕಾನಂದರ ನಡೆ ನುಡಿಗಳು ಅಗತ್ಯವೆನಿಸಿವೆ. ಇಂದಿನ ಮಕ್ಕಳಲ್ಲಿ ವಿವೇಕಾನಂದರ ಪುನಾವರ್ತನೆ ಆಗಬೇಕು ಎಂದರು.

       ಈ ನಾಡಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಗುರುಶಕ್ತಿ ದೊರಕಿದೆ. ವಿವೇಕಾನಂದರು ಅಂತಹ ಗುರುತರವಾದ ಗುರುಶಕ್ತಿಗಳಲ್ಲೊಬ್ಬರು. ಹೆಜ್ಜೆ ಹೆಜ್ಜೆಗೂ ಈ ದೇಶವನ್ನು ಅವಮಾನಿಸುತ್ತಿರುವ ರಾಷ್ಟ್ರವೇ ಇಲ್ಲಿಯ ಮಂದಿಗೆ ಮಾದರಿಯಾಗಿ ಕಾಣಿಸುವಾಗ, ದೇಸೀಯ ಚಿಂತನೆಗಳು ಮರೆಯಾಗಿ ವಿದೇಶೀಯತೆ ಆಪ್ಯಾಯಮಾನವಾಗುತ್ತಿರುವಾಗ ವಿವೇಕಾನಂದರ ವಿಚಾರಗಳು ಅತೀವ ಅಗತ್ಯವೆನಿಸಿವೆ. ನಾವೆಲ್ಲ ಅಕ್ಕಪಕ್ಕದ ಜೋಡಿ ಗೆರೆಗಳಂತಿದ್ದೇವೆ. ಪರಿಣಾಮವಾಗಿ ಯಾವತ್ತೂ ಒಗ್ಗೂಡುವುದೇ ಇಲ್ಲ. ಆದರೆ ಒಗ್ಗೂಡುವಿಕೆ ಇಂದಿನ ಅವಶ್ಯಕತೆ ಎಂದರು.

       ದಿಕ್ಸೂಚಿ ಭಾಷಣ ಮಾಡಿದ ಉಪನ್ಯಾಸಕ ಆದರ್ಶ ಗೋಖಲೆ ಮಾತನಾಡಿ ಅಖಂಡ ಭಾರತದ ಕಲ್ಪನೆಗೆ ಮಾದರಿ ಸ್ವಾಮಿ ವಿವೇಕಾನಂದರು. ಜಗತ್ತಿನ ಮುಖದಲ್ಲಿ ಭಾರತ ದಡ್ಡ ದೇಶವಲ್ಲ, ಬಹಳ ದೊಡ್ಡ ದೇಶ ಎಂದು ಸಾರಿದವರು. ಮಾತ್ರವಲ್ಲದೆ ಭಾರತ ಜಗತ್ತಿನ ಅತ್ಯಂತ ಪವಿತ್ರವಾದ ತೀರ್ಥಕ್ಷೇತ್ರವೆಂದು ಸಾರಿದವರು ಅವರು. ಅವರ ಚಿಂತನೆಗಳು ಸದಾ ಪ್ರಸ್ತುತ ಎಂದರು.

       ಸ್ವಾತಂತ್ರ್ಯ ಹೋರಾಟಕ್ಕೊಂದು ಸ್ಪಷ್ಟ ದಿಕ್ಕು ತೋರಿದವರು ವಿವೇಕಾನಂದರು. ಇಲ್ಲಿನ ಜನ ಪಾಶ್ಚಿಮಾತ್ಯ ವಿಕೃತಿಯೆಡೆಗೆ ಕೊಚ್ಚಿಹೋಗುತ್ತಿದ್ದಾಗ ಎಲ್ಲರನ್ನೂ ದೇಸೀಯತೆಗೆಡೆಗೆ ಸೆಳೆದ ಮಹಾನ್ ಸಂತ ಅವರು. ದಾಸ್ಯದ ಸಂದರ್ಭದಲ್ಲಿ ಯುವಕರಿಗೊಂದು ನೂತನ ಚೈತನ್ಯ ನೀಡಿದವರು ವಿವೇಕಾನಂದರು ಎಂದರು.

       ಅಧ್ಯಕ್ಷತೆ ವಹಿಸಿದ್ದ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ರಾಮ ಭಟ್, ಅಂದು ಒಬ್ಬ ಸೀತೆಯನ್ನು ಕದ್ದೊಯ್ದದ್ದಕ್ಕೆ ರಾಮಾಯಣವೇ ಸೃಷ್ಟಿಯಾಯಿತು. ಇಂದು ಜಿಲ್ಲೆಯಲ್ಲಿ ೩೪೨ ಹುಡುಗಿಯರ ನಾಪತ್ತೆ ಪ್ರಕರಣವಾದರೂ ಎಲ್ಲರೂ ಏನೂ ಆಗಿಲ್ಲವೆಂಬಂತೆ ತೆಪ್ಪಗಿರುವುದು ದುರಂತ. ಇಂದು ಪ್ರಜಾಪ್ರಭುತ್ವದ ಎಲ್ಲಾ ಅಂಗಗಳೂ ನಂಬಿಕೆ ಕಳೆದುಕೊಳ್ಳುತ್ತಿವೆ. ಹೀಗಿರುವಾಗ ವಿವೇಕಾನಂದರ ಚಿಂತನೆ,ಆದರ್ಶಗಳಿಂದ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಾಧ್ಯ ಎಂದು ಹೇಳಿದರು.

       ಈ ಸಂದರ್ಭದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರದ ವತಿಯಿಂದ ಈ ಹಿಂದೆ ನಡೆಸಲಾಗಿದ್ದ ಕೊಡಚಾದ್ರಿಯ ಜೀವವೈವಿದ್ಯಗಳ ಬಗೆಗಿನ ಅಧ್ಯಯನದ ಆಧಾರದಲ್ಲಿ  ಸಿದ್ಧಗೊಳಿಸಲಾದ ಕೃತಿಯನ್ನು ರಾಮ ಭಟ್ ಲೋಕಾರ್ಪಣೆಗೊಳಿಸಿದರು. ಅಲ್ಲದೆ ಡಿ.ವಿ.ಸದಾನಂದ ಗೌಡರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಸನ್ಮಾನಿಸಿದರು.

ವಿವೇಕಾನಂದ ಜಯಂತಿ ಪ್ರಯುಕ್ತ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರ್‌ಕಾಲೇಜು ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಆಂತರಿಕವಾಗಿ ನಡೆಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೂ ಪಾರಿತೋಷಕ ನೀಡಲಾಯಿತು. ಉಪನ್ಯಾಸಕ ಚಂದ್ರಹಾಸ ಕೆ.ಸಿ.ಸಿದ್ಧಪಡಿಸಿದ ವಿವೇಕವಾಣಿ ಎಂಬ ವಿವೇಕಾನಂದರ ನುಡಿಗಳಿರುವ ಕಿರುಹೊತ್ತಗೆಯನ್ನು ಸದಾನಂದ ಗೌಡ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಉಪಸ್ಥಿತರಿದ್ದರು. ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಕ್ತ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ, ವಿ.ವಿ.ಭಟ್, ಐಎಎಸ್ ಪ್ರಸ್ತಾವಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ ವಂದಿಸಿದರು. ಉಪನ್ಯಾಸಕಿಯರಾದ ಡಾ.ಶೋಭಿತಾ ಸತೀಶ್, ನಿವೇದಿತಾ ವಿ.ಆರ್. ಉಶಾ ಕಿರಣ್ ಹಾಗೂ ಉಪನ್ಯಾಸಕ ಹರೀಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.