ಬಯೋಮೆಟ್ರಿಕ್ ವಿಶಿಷ್ಟ ಚಾಪನ್ನು ಮೂಡಿಸಿದೆ : ಪ್ರೊ.ಹರಿ ವಿನೋದ್
ಪುತ್ತೂರು : ಬಯೋಮೆಟ್ರಿಕ್ ವ್ಯವಸ್ಥೆಯು ಸಮಾಜದಲ್ಲಿ ವಿಶಿಷ್ಟವಾದ ಚಾಪನ್ನು ಮೂಡಿಸಿದೆ. ಈ ತಂತ್ರಜ್ಞಾನವನ್ನು ಬಳಸುದರ ಮೂಲಕ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ವ್ಯವಸ್ಥೆಯು ಕೇವಲ ಕಾರ್ಮಿಕ ವಲಯದಲ್ಲಿ ಮಾತ್ರವಲ್ಲದೆ ಕ್ರಿಮಿನಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ಅಪರಾಧಿಗಳನ್ನು ಪತ್ತೆ ಹಚ್ಚಲೂ ಸಹಕಾರಿಯಾಗಿದೆ ಎಂದು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಹರಿ ವಿನೋದ್ ಹೇಳಿದರು.
ಅವರು ಸೋಮವಾರ ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐ.ಟಿ ಕ್ಲಬ್‌ನ ಕಾರ್ಯಚಟುವಟಿಕೆಯನ್ನು ಉದ್ಘಾಟಿಸಿ ಬಯೋಮೆಟ್ರಿಕ್ ತಂತ್ರಜ್ಞಾನದ ಕುರಿತಾಗಿ ಮಾತನಾಡಿದರು.
ಈ ವ್ಯವಸ್ಥೆಯಲ್ಲಿ ಕೇವಲ ಕೈಬೆರಳುಗಳನ್ನು ಮಾತ್ರವಲ್ಲದೆ ಕಣ್ಣು, ಧ್ವನಿ ಹಾಗೂ ಡಿ.ಎನ್.ಎ ಇತ್ಯಾದಿಯನ್ನೂ ಒಳಪಡಿಸಬಹುದಾಗಿದೆ. ಈ ವ್ಯವಸ್ಥೆ ಪ್ರಸ್ತುತ ಸಮಾಜದಲ್ಲಿ ಶೀಘ್ರವಾಗಿ ಪಸರಿಸುತ್ತಿದ್ದರೂ ಕೆಲವು ವ್ಯಕ್ತಿಗಳು ಇಲ್ಲೂ ಮೋಸ ಮಾಡುವ, ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುವುದು ವಿಷಾದನೀಯ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಬಯೋಮೆಟ್ರಿಕ್ ವ್ಯವಸ್ಥೆಯಿಂದಾಗಿ ಸಮಯ ಪ್ರಜ್ಞೆಯೊಂದಿಗೆ ಶಿಸ್ತನ್ನು ಬೆಳೆಸಿಕೊಳ್ಳಬಹುದು. ಈ ವ್ಯವಸ್ಥೆಯಿಂದಾಗಿ ಸಾಮಾಜಿಕವಾಗಿ ಸ್ವಲ್ಪಮಟ್ಟಿಗೆ ಬದ್ಧತೆಯನ್ನು ಕಾಣಬಹುದು. ವಿಜ್ಞಾನದ ಯಾವುದೇ ಆವಿಷ್ಕಾರಗಳನ್ನಾದರೂ ಧನಾತ್ಮಕ ವಿಷಯಕ್ಕೆ ಬಳಸಬೇಕೇ ಹೊರತು ಅದನ್ನು ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದು ಕಿವಿಮಾತು ನುಡಿದರು.
ಐ.ಟಿ ಕ್ಲಬ್‌ನ ಸಂಯೋಜಕಿ ರಮ್ಯಾ ಕಶ್ಯಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸಚಿನ್ ಎಮ್. ಸ್ವಾಗತಿಸಿ, ಕಾರ್ಯದರ್ಶಿ ಪ್ರಾರ್ಥನ್ ವಂದಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿಯರಾದ ಶ್ರೇಯ ಮತ್ತು ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.