ವಿವೇಕಾನಂದದಲ್ಲಿ ರಕ್ತದಾನ ಶಿಬಿರ
ಪುತ್ತೂರು: ಮನುಷ್ಯ ತನ್ನ ದೇಹದ ರಕ್ತವನ್ನು ಇನ್ನೊಬ್ಬರಿಗೆ ದಾನ ಮಾಡಿ ಅವರ ಜೀವ ಉಳಿಸುವುದರ ಜೊತೆಗೆ ತನ್ನ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ರಕ್ತದಾನ ಮಾಡುವ ಹವ್ಯಾಸವನ್ನು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲರೂ ಬೆಳೆಸಿಕೊಳ್ಳಬೇಕು. ಅಷ್ಟೇ ಅಲ್ಲದೇ ತಾನು ಕಾಲೇಜು ಜೀವನದಲ್ಲಿ ರಕ್ತದಾನವನ್ನು ಮಾಡಿ ಸ್ವತಃ ಅನುಭವವುಳ್ಳ ಹಿನ್ನಲೆಯನ್ನು ಹೊಂದಿದ್ದೇನೆ ಎಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಮೆಡಿಕಲ್ ಅಧಿಕಾರಿ ಡಾ. ಬಿನು ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಯುನಿಟ್, ರೋವರ್ಸ್ ಆಂಡ್ ರೇಂಜರ್ಸ್ ಹಾಗೂ ಪುತ್ತೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ನಾವು ಒಬ್ಬರಿಗೆ ರಕ್ತದಾನ ಮಾಡಿದರೆ ಅವರನ್ನು ಕಷ್ಟದಿಂದ ದೂರ ಮಾಡಿದ ತಂದೆ ತಾಯಿಗಳಾಗುತ್ತೇವೆ. ರಕ್ತದಾನ ಮಾಡಿದಾಗ ಜೀವನದಲ್ಲಿ ಹೊಸ ಚೈತನ್ಯ ಬರುತ್ತದೆ ಎಂದು ಹೇಳಿದರು.
ಪುತ್ತೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಆಸ್ಕರ್ ಆನಂದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ರೆಡ್ ಕ್ರಾಸ್, ರೋವರ್ಸ್ ಆಂಡ್ ರೇಂಜರ್ಸ್, ರಾಷ್ಟ್ರೀಯ ಸೇವಾ ಯೋಜನೆ ಅಧೀಕಾರಿಗಳಾದ ವಿಜಯ ಲಕ್ಷ್ಮಿ, ದಿವ್ಯಶ್ರೀ, ಡಾ. ಅರುಣ್ ಪ್ರಕಾಶ್, ಪುತ್ತೂರಿನ ಭಾರತೀಯ ರೆಡ್ ಸಂಸ್ಥೆ ಯ ಉಪಾಧ್ಯಕ್ಷ ಡಾ.ಅಶೋಕ್ ಪಡಿವಾಳ್, ಸದಸ್ಯ ಹೆರಾಲ್ಡ್ ಮಾರ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ವಿ.ಜೆ.ಫೆರ್ನಾಂಡಿಸ್ ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ಹಿತಶ್ರೀ, ದೀಪಿಕಾ, ಧನ್ಯಶ್ರೀ ಪ್ರಾರ್ಥಿಸಿದರು, ಪುತ್ತೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮತ್ತೋರ್ವ ಕಾರ್ಯದರ್ಶಿ ಜಗಜ್ಜೀವನ್ದಾಸ್ ರೈ ವಂದಿಸಿದರು, ಕಾಲೇಜಿನ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.