ರಕ್ತದಾನವು ಸಮಾಜಕ್ಕೆ ನೀಡುವ ಕೊಡುಗೆ : ಶ್ರೀನಿವಾಸ ಪೈ
ಪುತ್ತೂರು: ದಾನಗಳಲ್ಲಿ ಶ್ರೇಷ್ಟವಾದುದು ರಕ್ತದಾನ. ಅನೇಕ ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆಗಳಿರುತ್ತದೆ. ಅರೋಗ್ಯವಂತರು ರಕ್ತದಾನ ಮಾಡುವುದರಿಂದ ಅನೇಕರಿಗೆ ಜೀವದಾನ ಮಾಡಿದಂತಾಗುವುದು. ಇದು ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ. ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆಯ ಕಡೆಗೆ ಮಾತ್ರವಲ್ಲದೇ ಸಾಮಾಜಿಕ ಕಳಕಳಿಯ ಕಡೆಗೂ ಗಮನ ನೀಡಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ವಿದ್ಯಾರ್ಥಿ ಸಂಘ, ಭಾರತೀಯ ರೆಡ್ ಕ್ರಾಸ್ ಸೊಸೈಟಿ,ಪುತ್ತೂರು ತಾಲೂಕು ಘಟಕ ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರು ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನವು ಹೃದಯಕ್ಕೆ ಸಂಬಂಧಿಸಿದ್ದು.ಇದರಿಂದ ಮನಸ್ಸಿಗೆ ಆನಂದ ದೊರೆಯುತ್ತದೆ. ರಕ್ತದಾನದಿಂದ ಸಮಾಜದೊಂದಿಗೆ ಆತ್ಮೀಯತೆ ಬೆಳೆಯಲು ಸಹಾಯಕವಾಗುತ್ತದೆ. ಮಾತ್ರವಲ್ಲದೇ ನಿಸ್ವಾರ್ಥ ರಕ್ತದಾನದ ಅವಶ್ಯಕತೆಯಿದೆ. ಇದರಿಂದ ಪ್ರಾಣ ಉಳಿಸಿದ ಧನ್ಯತಾಭಾವವು ಸಿಗುತ್ತದೆ. ಎಲ್ಲರೂ ರಕ್ತದಾನದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.
ಪುತ್ತೂರಿನ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಆಸ್ಕರ್ ಆನಂದ್ ಮಾತನಾಡಿ, ರಕ್ತದಾನ ಶಿಬಿರವು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷವೂ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಿಗೆ ಸಮಾಜ ಕಡೆಗೆ ಆದರ ವ್ಯಕ್ತಪಡಿಸಲು ಸೂಕ್ತವೇದಿಕೆಯಾಗಿದೆ. ಇದರಿಂದ ರಕ್ತದಾನಕ್ಕೆ ಪ್ರೇರಣೆ ದೊರೆಯುತ್ತದೆ.. ಅನೇಕ ಬಾರಿ ಸೂಕ್ತ ಸಂದರ್ಭಗಳಲ್ಲಿ ರಕ್ತದೊರೆಯದೇ ಇದ್ದ ಸಂದರ್ಭಗಳಲ್ಲಿ ದಾನಿಗಳ ರಕ್ತವನ್ನು ಬಳಸಿಕೊಂಡದ್ದಿದೆ. ರಕ್ತದಾನ ಮಾಡಿ ಅನೇಕರ ಪ್ರಾಣ ಉಳಿಸುವಲ್ಲಿ ಅತಿ ಮುಖ್ಯ ಪಾತ್ರವಹಿಸಿದಂತಾಗುತ್ತದೆ ಎಂದರು.
ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪ್ರೊ.ಕೃಷ್ಣ ಕಾರಂತ ಮತ್ತು ಅನಿತಾ ಕಾಮತ್ ಕೆ ಉಪಸ್ಥಿತರಿದ್ದರು. ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ನ ಮುಖ್ಯಸ್ಥ ಡಾ. ಅಪೂರ್ವ್ ರಕ್ತದಾನದ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ಥಾವಿಸಿದರು. ಯೂತ್ ರೆಡ್ ಕ್ರಾಸ್ನ ಸಂಯೋಜಕ ಡಾ.ಅರುರ್ಣ ಪ್ರಕಾಶ್ ಸ್ವಾಗತಿಸಿದರು, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ರೋಹಿಣಾಕ್ಷ ಶಿರ್ಲಾಲು ವಂದಿಸಿದರು, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ವಿದ್ಯಾ.ಎಸ್ ನಿರ್ವಹಿಸಿದರು.