ಡಾ. ಸಿ.ಎಸ್.ಶಾಸ್ತ್ರಿ ಅವರ ’ಅವಿಭಕ್ತ ಸಂಸಾರದ ನೆನಪುಗಳ ಸರಮಾಲೆ’ ಪುಸ್ತಕ ಲೋಕಾರ್ಪಣೆ
ಪುತ್ತೂರು: ಕಾಲ ಬದಲಾಗಿದೆ ಎನ್ನುವುದಕ್ಕಿಂತ ನಾವು ಬದಲಾಗಿದ್ದೇವೆ ಅನ್ನುವುದೇ ಸೂಕ್ತ. ನಾವಿಂದು ನಮ್ಮ ನಮ್ಮ ಮೂಲ ಮನೆಗಳಲ್ಲಿಲ್ಲ. ನಾನಾ ಕಾರಣಗಳಿ ಮನೆಯಿಂದ ದೂರವಾಗಿ ಬದುಕುತ್ತಿದ್ದೇವೆ. ಅಂತೆಯೇ ಹಿರಿಯರ ಮಾತು ಕೇಳುವ ಸ್ಥಿತಿಯಲ್ಲೂ ನಾವಿಲ್ಲ ಎಂದು ಸಾಹಿತಿ, ಚಿಂತಕ ಡಾ.ನಾ. ಮೊಗಸಾಲೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಸಂಘ ಹಾಗೂ ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಡಾ.ಸಿ. ಎಸ್. ಶಾಸ್ತ್ರಿ ಅವರು ರಚಿಸಿದ ’ಅವಿಭಕ್ತ ಸಂಸಾರದ ನೆನಪುಗಳ ಸರಮಾಲೆ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತಿ ಲಕ್ಷೀಶ ತೊಳ್ಪಾಡಿ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಒಂದು ಪುಸ್ತಕ ಬರೆಯಬಹುದಾದ ವಸ್ತು ಹುದುಗಿದೆ. ವಯಸ್ಸಾಗುತ್ತಾ ಇದ್ದ ಹಾಗೆ ಬಾಲ್ಯ ನೆನಪಾಗುತ್ತದೆ. ಅದು ಅವಿಮಶಾತ್ಮಕವಾಗಿ ಜೀವಿಸಿದ ಕಾಲ. ಇದು ಎಲ್ಲಾ ಕಾಲಕ್ಕೂ ಸಾಹಿತ್ಯಿಕ ವಸ್ತು. ಜೀವನ ಹೀಗೂ ಇತ್ತು ಎಂದು ವಿಮರ್ಶೆಗೆ ಒಡ್ಡಿಕೊಳ್ಳುವ ಹಾಗೆ ಸಿ. ಎಸ್. ಶಾಸ್ತ್ರಿ ಬರೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ತಾಳ್ತಜೆ ವಸಂತಕುಮಾರ್ ಮಾತನಾಡಿ ಈಗ ತಂದೆ ಜೊತೆ ಮಗ ಇದ್ದರೆ ಅವಿಭಕ್ತ ಕುಟುಂಬ ಎನ್ನುವ ಸ್ಥಿತಿಗೆ ಕಾಲ ತಲುಪಿದೆ. ಅಂತಹ ಸಂದರ್ಭದಲ್ಲಿ ಸಿ. ಎಸ್. ಶಾಸ್ತ್ರಿ ಅವಿಭಕ್ತ ಕುಟುಂಬದ ಅದ್ಭುತ ಚಿತ್ರಣ ನೀಡಿದ್ದಾರೆ ಎಂದರು. ಕೃತಿ ಕರ್ತೃ ಡಾ.ಸಿ. ಎಸ್. ಶಾಸ್ತ್ರಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಖಿಲಾ ಪಜಿಮಣ್ಣು ಆಶಯ ಗೀತೆ ಹಾಡಿದರು. ಮಣಿಲ ಸುಬ್ಬಣ್ಣ ಶಾಸ್ತ್ರಿ ಸ್ವಾಗತಿಸಿ, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್. ಜಿ. ಶ್ರೀಧರ್ ವಂದಿಸಿದರು. ಉಪನ್ಯಾಸ ಡಾ.ರೋಹಿಣಾಕ್ಷ ಕಾರ್ಯಕ್ರಮ ನಿರೂಪಿಸಿದರು