ಗ್ರಾಮೀಣ ಜನತೆಗೆ ಕ್ಯಾನ್ಸರ್ನ ಮಾಹಿತಿ ಅವಶ್ಯಕ: ಡಾ. ಇಬ್ರಾಹಿಂ ನಾಗ್ನೂರ್
ಪುತ್ತೂರು: ಕ್ಯಾನ್ಸರ್ ಬಗೆಗಿನ ಮಹತ್ವ ಬಹಳ ಮುಖ್ಯವಾದುದು. ಇದರ ಮಾಹಿತಿಯನ್ನು ತಿಳಿದುಕೊಂಡಾಗ ಕೆಲವು ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು. ವಿದ್ಯಾರ್ಥಿಗಳು ಕ್ಯಾನ್ಸರ್ನ ಬಗ್ಗೆ ಮಾಹಿತಿಯನ್ನು ತಿಳಿದು ಗ್ರಾಮೀಣ ಜನತೆಗೆ ಮಾಹಿತಿಯನ್ನು ತಿಳಿಸಬೇಕು. ಇದರಿಂದ ಜನರಲ್ಲಿ ಕ್ಯಾನ್ಸರ್ ತಡೆಗಟ್ಟುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಂತಾಗುವುದು ಎಂದು ಎನೋಪೋಯ ಪ್ರಿವೆಂಟಿವ್ ಅಕೋಲಜಿಯ ಸಲಹಾಧಿಕಾರಿ ಡಾ. ಇಬ್ರಾಹಿಂ ನಾಗ್ನೂರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯೆನೆಪೋಯ ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಯಾನ್ಸರ್ ತಡೆಗಟ್ಟುವ ವಿಧಾನ ಎಂಬ ವಿಷಯದ ಬಗೆಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ. ವಿನೀತಾ ರೈ ಮಾತನಾಡಿ ರಾಷ್ಟ್ರೀಯ ಯೋಜನೆ ಒಂದು ಸೇವೆ. ಜನತೆಗೆ ಜಾಗೃತಿಯನ್ನು ಮೂಡಿಸುವುದು ಯೋಜನೆಯ ಕರ್ತವ್ಯ. ಇದರೊಂದಿಗೆ ಆರೋಗ್ಯದ ರಕ್ಷಣೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪೈ ಮಾತನಾಡಿ ಮನುಷ್ಯರಾಗಿ ಜೀವನವನ್ನು ಪಡೆದುಕೊಂಡ ಮೇಲೆ ಪ್ರತಿಯೊಬ್ಬನಿಗೂ ಜವಾಬ್ದಾರಿ ಇರುತ್ತದೆ ಹಾಗೂ ಅದನ್ನು ಸರಿಯಾಗಿ ನಿರ್ವಹಿಸಬೇಕು. ಜೀವನದಲ್ಲಿ ದೊರೆತ ಜ್ಞಾನವನ್ನು ಮತ್ತೊಬ್ಬರಿಗೆ ಹಂಚಿ ಅದರ ಅರಿವನ್ನು ಪಡೆದುಕೊಳ್ಳುವುದರಲ್ಲಿ ವಿಫಲರಾಗದಂತೆ ನೋಡಿಕೊಳ್ಳಬೇಕು. ಇಂತಹ ವಿಚಾರಗಳನ್ನು ವಿದ್ಯಾರ್ಥಿಗಳು ಮಾಡಿದಾಗ ಹೆಚ್ಚಿನ ಅನುಭವಗಳನ್ನು ಪಡೆಯಲು ಸಾಧ್ಯ ಎಂದು ನುಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಯೆನೆಪೋಯದ ವೈದ್ಯಕೀಯ ಅಧಿಕಾರಿ ಡಾ. ಅಶ್ವಿನಿ ಎಸ್.ಶೆಟ್ಟಿ, ಡಾ. ಪದ್ಮಿನಿ, ಡಾ, ಲಕ್ಷ್ಮಿ ನಾರಾಯಣ್, ಡಾ. ಇಮ್ರಾನ್ ಪಾಷಾ , ಇಂಡಿಯನ್ ಆಯಿಲ್ ಎಕ್ಸಿಕ್ಯೂಟಿವ್ ಅಧಿಕಾರಿ ಮುರಳೀಧರ್ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ ಜಯರಾಮ್ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ ಹರಿಪ್ರಸಾದ್ ಎಸ್. ಸ್ವಾಗತಿಸಿ, ವಿದ್ಯಾ ಎಸ್. ವಂದಿಸಿ, ಡಾ.ಅರುಣ್ ಪ್ರಕಾಶ್ ಕಾರ್ಯಕ್ರಮವನ್ನು ನಿರ್ವಹಿಸಿದರು.