ನಾಗರಿಕ ಸೇವೆ ವಿದ್ಯಾರ್ಥಿಗಳ ಆದ್ಯತೆಯಾಗಬೇಕು: ಕ್ಯಾ.ಗಣೇಶ್ ಕಾರ್ಣಿಕ್
ಪುತ್ತೂರು: ಸಂವಿಧಾನದ ಆಶಯವನ್ನು ಅರ್ಥ ಮಾಡಿಕೊಂಡು ಅದನ್ನು ಅನುಷ್ಟಾನ ಮಾಡುವುದಕ್ಕೆ ಅತ್ಯಂತ ವ್ಯವಸ್ಥಿತವಾದ ಮತ್ತು ಪ್ರಾಮಾಣಿಕವಾದ ಕಾರ್ಯಾಂಗ, ರಾಜ್ಯಾಂಗ ಹಾಗೂ ನ್ಯಾಯಾಂಗದ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ನಾಗರಿಕ ಸೇವೆಯಲ್ಲಿ ತೊಡಗುವ ಹುಮ್ಮಸ್ಸು ಮಕ್ಕಳಲ್ಲಿ ಮೂಡಬೇಕಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಭಾನುವಾರ ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರದ ವತಿಯಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಆಯ್ದ ೭೫ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಶಿಕ್ಷಣ ಸಂಸ್ಥೆಗಳ ಹತ್ತನೆಯ ತರಗತಿ ಮತ್ತು ಪಿ.ಯು.ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಅವರ ಹೆತ್ತವರಿಗಾಗಿ ಭಾರತೀಯ ನಾಗರಿಕ ಸೇವೆಗಳು – ಮಹತ್ವ ಮತ್ತು ಅವಕಾಶಗಳು ಅನ್ನುವ ವಿಚಾರಗಳ ಬಗೆಗಿನ ಒಂದು ದಿನದ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ನಾಗರಿಕ ಸೇವೆಯಲ್ಲಿ ತೊಡಗುವ ಕನಸು ಕಾಣಬೇಕು. ಈ ಹಿನ್ನಲೆಯಲ್ಲಿ ಹೆತ್ತವರೂ ಪ್ರೇರಣೆ ನೀಡಬೇಕಿದೆ. ಒಮ್ಮೆ ವಿದ್ಯಾರ್ಥಿಯೊಬ್ಬನಲ್ಲಿ ಸ್ಪಷ್ಟ ಗುರಿ ರೂಪುಗೊಂಡರೆ ನಂತರ ಈ ಜಗತ್ತಿನ ಯಾವ ಸಂಗತಿಯೂ ಆತ ಗುರಿ ತಲುಪುವುದನ್ನು ತಡೆಯಲಾರವು. ಆದ್ದರಿಂದ ಕಣ್ಣಿಗೆ ಬಹು ಸುಲಭವಾಗಿ ಕಾಣುವ ಮಾಮೂಲಿ ಉದ್ಯೋಗಗಳನ್ನಷ್ಟೇ ಕೇಂದ್ರೀಕರಿಸದೆ ನಾಗರಿಕ ಸೇವೆಯಂತಹ ಉಚ್ಚ ಹುದ್ದೆಯತ್ತ ದೃಷ್ಟಿ ಹಾಯಿಸಬೇಕಾದ್ದು ಇಂದಿನ ಅಗತ್ಯ ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್ ಮಾತನಾಡಿ, ಮಕ್ಕಳನ್ನು ನಾಗರಿಕ ಸೇವೆಗೆ ತಯಾರು ಮಾಡುವ ಕನಸನ್ನು ಹೆತ್ತವರು ಕಾಣಬೇಕು. ಚುನಾವಣೆಯಲ್ಲಿ ಆಯ್ಕೆಯಾದವರು ನಿಗದಿತ ಸಮಯದಲ್ಲಿ ಕೆಳಗಿಳಿಯಬೇಕು. ಆದರೆ ನಾಗರಿಕ ಸೇವಾ ಅಧಿಕಾರಿಗಳು ನಿವೃತ್ತಿಯಾಗುವವರೆಗೂ ಉನ್ನತ ಹುದ್ದೆಯಲ್ಲೇ ಇರುತ್ತಾರೆ ಮಾತ್ರವಲ್ಲದೆ ನಿಜವಾದ ಕಾರ್ಯಭಾರಿಗಳು ಅವರೇ ಆಗಿದ್ದಾರೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಡಾ.ವಿಘ್ನೇಶ್ವರ ವರ್ಮುಡಿ ರಚಿಸಿರುವ ನಾಗರಿಕ ಸೇವಾ ಅವಕಾಶಗಳ ಬಗೆಗಿನ ಮಾಹಿತಿ ಕೃತಿಯನ್ನು ಕೆ.ರಾಮ ಭಟ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಐ.ಎ.ಎಸ್ ಅಧಿಕಾರಿ ವಿ.ವಿ.ಭಟ್ ವಿವೇಕಾನಂದ ವಿದ್ಯಾವರ್ಧಕ ಸಂಘವು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಆರಂಭಿಸಿರುವ ನೂತನ ನಾಗರಿಕ ಸೇವಾ ಮಾರ್ಗದರ್ಶಿ ಅಂತರ್ಜಾಲ ತಾಣ ಯಶಸ್ ಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ ಉಪಸ್ಥಿತರಿದ್ದರು. ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ವಿಘ್ನೇಶ್ವರ ವರ್ಮುಡಿ ಪ್ರಸ್ತಾವನೆಗೈದರು. ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಸಂಶೋಧನಾ ಕೇಂದ್ರದ ವಿಜ್ಞಾನ ತಂತ್ರಜ್ಞಾನ ವಿಭಾಗದ ನಿರ್ದೇಶಕ ಎಂ.ಜಿ.ಭಟ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.