ಬದುಕಿನ ಉತ್ಕರ್ಷಕ್ಕೆ ಕ್ಲೌಡ್ ಕಂಪ್ಯೂಟಿಂಗ್ ಸಹಕಾರಿ : ಡಾ.ನಾಗಭೂಷಣ್
ಪುತ್ತೂರು: ಆಧುನಿಕ ಸಂದರ್ಭಗಳಲ್ಲಿ ನಮ್ಮ ಕೆಲಸ ಕಾರ್ಯಗಳ ಪರಿಣಾಮಗಳ ಬಗೆಗೆ ತುಲನಾತ್ಮಕ ಅಧ್ಯಯನ ನಡೆಸಲು ವೀಡಿಯೋಗಳು ಸಹಕಾರಿಯೆನಿಸುತ್ತವೆ. ಆದರೆ ನಮ್ಮ ನಿತ್ಯ ಕಾರ್ಯಗಳನ್ನು ವೀಡಿಯೋ ದಾಖಲೀಕರಣಗೊಳಿಸಿ ಸಂರಕ್ಷಿಸಿಡಲು ವಾತಾವರಣ ಅರ್ಥಾತ್ ಕ್ಲೌಡ್ ಕಂಪೂಟಿಂಗ್ನ ಅನಿವಾರ್ಯತೆಯಿದೆ. ಮುಂದಿನ ದಿನಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ನ ಪ್ರಾಮುಖ್ಯತೆ ಹೆಚ್ಚಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ಲಾನಿಂಗ್ ಬೋರ್ಡ್ ಮಾಜಿ ನಿರ್ದೇಶಕ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಪಿ.ನಾಗಭೂಷಣ್ ಹೇಳಿದರು.ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಕರೆಂಟ್ ಅಂಡ್ ಪ್ಯೂಚರ್ ಟ್ರೆಂಡ್ಸ್ ಇನ್ ಕ್ಲೌಡ್ ಅಂಡ್ ಹೈ ಫರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಅನ್ನುವ ವಿಷಯದ ಬಗೆಗಿನ ಯು.ಜಿ.ಸಿ. ಪ್ರಾಯೋಜಿತ ಒಂದು ದಿನದ ಪ್ರಬಂಧ ಮಂಡನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ಜಗತ್ತಿನಲ್ಲಿ ಹೊಸತಾದ ಸಾಪ್ಟ್ವೇರ್ಗಳನ್ನು ಕಂಡುಹುಡುಕುವುದಕ್ಕೆ ಗಣಕ ವಿಜ್ಞಾನ ವಿದ್ಯಾರ್ಥಿಗಳು ಯತ್ನಿಸಬೇಕು. ಮಾತ್ರವಲ್ಲ ನಮ್ಮ ಎಲ್ಲಾ ಪ್ರಯತ್ನಗಳನ್ನು ಸಾಕಾರಗೊಳಿಸುವ ಹೈ ಪವರ್ ಕಂಪ್ಯೂಟರ್ಗಳ ಬಗೆಗೂ ಯೋಚಿಸಬೇಕು. ನಮ್ಮ ಸಾಮರ್ಥ್ಯದ ಬಗೆಗೆ ಪರಾಮರ್ಶನ ನಡೆಸುವುದಕ್ಕೂ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಹೈಪವರ್ ಕಂಪ್ಯೂಟರ್ಗಳು ಸಹಕಾರಿ. ಈ ನಿಟ್ಟಿನಲ್ಲಿ ಬದುಕಿನ ಉತ್ಕರ್ಷಕ್ಕೆ ಇವುಗಳು ಅಗತ್ಯ ಎಂದು ನುಡಿದರು. ಸಂಪನ್ಮೂಲಗಳ ಕ್ರೋಡೀಕರಣ ಹಾಗೂ ಪ್ರತಿಯೊಂದು ಸಂಗತಿಗಳನ್ನೂ ಸಂರಕ್ಷಿಸಿಡುವ ತಾಣವಾಗಿ ಇಂದು ಕ್ಲೌಡ್ ಕಂಪ್ಯೂಟಿಂಗ್ ಮೂಡಿಬಂದಿದೆ. ಯಾವ್ಯಾವ ಸಂದರ್ಭದಲ್ಲಿ ನಮಗೆ ಆ ಸಂಪನ್ಮೂಲ ಬೇಕೋ ಆಯಾ ಸಂದರ್ಭದಲ್ಲಿ ನಾವದನ್ನು ಬಳಸುವುದಕ್ಕೆ ಸಾಧ್ಯ ಎಂದರಲ್ಲದೆ ಇಂದಿನ ಫೋಟೋ ಹಾಗೂ ವೀಡಿಯೋಗಳ ಮಿಶ್ರಣ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿಯೂ ಕ್ಲೌಡ್ ಹಾಗೂ ಹೈಪವರ್ ಕಂಪ್ಯೂಟರ್ಗಳು ಉಪಯೋಗಕಾರಿ ಎಂದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ. ಶಂಕರನಾರಾಯಣ ಭಟ್ ಮಾತನಾಡಿ ಮಾಹಿತಿಯನ್ನು ಸಂರಕ್ಷಿಸಿಡುವುದಕ್ಕೆ ಗಣಕ ವಿಜ್ಞಾನಿಗಳು ಅನೇಕ ಸಾಧನಗಳನ್ನು ನಮಗೆ ಸಾಧಿಸಿ ತೋರಿಸಿದ್ದಾರೆ. ಅದರಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಕೂಡ ಒಂದು. ನಮಗೆ ಅರಿವಿದ್ದೋ ಇಲ್ಲದೆಯೋ ನಾವು ಅದನ್ನು ನಿತ್ಯವೂ ಬಳಸುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ವಿವೇಕಾನಂದ ಕಾಲೇಜು ಇಂದು ಆಧುನಿಕ ವಸ್ತುವಿಷಯಗಳಿಗೆ ತೆರೆದುಕೊಂಡು ಮುನ್ನಡೆಯುತ್ತಿದೆ. ಅದರ ಪರಿಣಾಮವಾಗಿಯೇ ಇಂತಹ ವಿಷಯಗಳ ಬಗೆಗೆ ವಿಚಾರ ಮಂಡನೆಗಳು ನಡೆಯುತ್ತಿವೆ ಎಂದರು.
ವೇದಿಕೆಯಲ್ಲಿ ಬೀರಿ ಎಐಎಂಐಟಿಯ ಎಂ.ಸಿ.ಎ. ವಿಭಾಗ ಮುಖ್ಯಸ್ಥೆ ಪ್ರೊ.ಮನಿಮೋಳಿ, ಕಾಲೇಜಿನ ಸಂಚಾಲಕ ಎಂ.ಟಿ.ಜಯರಾಮ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅನುಶ್ರೀ ಹಾಗೂ ಅಮೃತರಶ್ಮಿ ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಉಪನ್ಯಾಸಕಿ ರಮ್ಯಾ ಕಾಶ್ಯಪ್ ವಂದಿಸಿದರು. ಉಪನ್ಯಾಸಕಿ ಜೀವಿತಾ ಕಾರ್ಯಕ್ರಮ ನಿರ್ವಹಿಸಿದರು.