ಯುವಸಮೂಹ ನೈತಿಕವಾಗಿ ಬೆಳೆದು ದೇಶಕ್ಕೆ ಶಕ್ತಿ ತುಂಬಬೇಕು :ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕುಲಸಚಿವ ಪ್ರೊ.ಲೋಕೇಶ್
ಪುತ್ತೂರು : ದೇಶದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯುವಸಮೂಹದ ಪಾತ್ರ ಬಹುಮುಖ್ಯವಾದುದು. ಈ ಹಿನ್ನಲೆಯಲ್ಲಿ ಸಾಧ್ಯತೆ, ಸಾಮರ್ಥ್ಯದ ಬಗೆಗೆ ಪ್ರತಿಯೊಬ್ಬರೂ ಅರಿಯಬೇಕು ಮಾತ್ರವಲ್ಲದೆ ಸರಿಯಾದ ಹಾದಿಯಲ್ಲಿ ಮುನ್ನಡೆದು ದೇಶಕ್ಕೆ ಶಕ್ತಿಯನ್ನು ತುಂಬಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಇಂದು ಒಂದಷ್ಟು ಮಂದಿ ಯುವಜನತೆ ಮತಾಂಧ ಸಂಸ್ಥೆಗಳಿಗೆ ತಮ್ಮನ್ನು ಮಾರಿಕೊಂಡು ನೈತಿಕವಾಗಿ ಕುಸಿಯುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶಕ್ಕಾಗಿ ನೆತ್ತರನ್ನು ಚೆಲ್ಲಿದ, ರಾಷ್ಟ್ರಭಕ್ತಿಗೆ ಮಾದರಿಯೆನಿಸುವ ರಾಷ್ಟ್ರದಲ್ಲಿ ಮಾರಕ ಮನಸ್ಥಿತಿಯೂ ಹುಟ್ಟಿಕೊಳ್ಳುತ್ತಿರುವುದು ಆತಂಕಕಾರಿ. ಇದಕ್ಕೆ ಶಿಕ್ಷಣ ಕ್ಷೇತ್ರದ ವೈಫಲ್ಯ ಕಾರಣವೇ ಅಥವ ನೈತಿಕತೆಯ ಪಾಠದ ಕೊರತೆಯೇ ಎಂಬುದು ಜಿಜ್ಞಾಸೆಗೆ ಕಾರಣವಾಗುತ್ತಿರುವ ಅಂಶ ಎಂದು ಹೇಳಿದರು.
ಅತ್ಯಂತ ವೈಭವದ ಇತಿಹಾಸವಿರುವ ದೇಶದಲ್ಲಿ ನಾವು ಜೀವಿಸುತ್ತಿದ್ದೇವೆ ಅನ್ನುವುದೇ ಬಹುದೊಡ್ಡ ಹೆಮ್ಮೆ. ಈ ದೇಶಕ್ಕೆ ಪ್ರಪಂಚದ ನಾನಾ ಭಾಗಗಳಿಂದ ವಿವಿಧ ವರ್ಗದ ಜನರು ಆಗಮಿಸಿದ್ದು ಮಾತ್ರವಲ್ಲದೆ ಕೆಲವರು ಇಲ್ಲೇ ಉಳಿದು ತಮ್ಮ ಭವಿಷ್ಯವನ್ನು ಕಂಡುಕೊಂಡರು. ಹಾಗಾಗಿಯೇ ಭಾರತ ಒಂದು ವಿಶಿಷ್ಟ ರಾಷ್ಟ್ರವಾಗಿ ಪ್ರಾಪಂಚಿಕವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅನೇಕ ಸವಾಲುಗಳೂ ಸೃಷ್ಟಿಯಾಗಿ ಸಾಕಷ್ಟು ಕಷ್ಟಕ್ಕೆ ಗುರಿಯಾಗುವಂತಾಗುವಂತಾಯಿತು. ಆದಾಗ್ಯೂ ಭಾರತ ನುಚ್ಚುನೂರಾಗದೆ ಬಲಿಷ್ಟವಾಗಿಯೇ ಉಳಿದಿದೆ ಎಂದು ನುಡಿದರು.
ಮತ್ತೋರ್ವ ಅತಿಥಿ ಮಂಗಳೂರಿನ ಎ.ಜೆ.ವ್ಯವಹಾರ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ.ಟಿ.ಜಯಪ್ರಕಾಶ್ ರಾವ್ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳು ಸಂಭವಿಸಿವೆ. ಬೋಧನೆ ಕೇವಲ ತರಗತಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ತರಗತಿಯಾಚೆಯ ಬೋಧನೆಗಳೂ ಇಂದಿನ ಪಠ್ಯದ ಭಾಗವೇ ಆಗಿವೆ. ಆದುದರಿಂದ ಈ ಬದಲಾವಣೆಯಲ್ಲಿ ನಮ್ಮನ್ನು ನಾವು ಉನ್ನತಿಯೆಡೆಗೆ ಒಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ಸತತ ಪ್ರಯತ್ನದಿಂದ ಸಾಧನೆ ಸಾಧ್ಯವಾಗುತ್ತದೆ. ವಿವೇಕಾನಂದರ ಆದರ್ಶ ನಮಗೆ ದಾರಿದೀಪವಾಗಬೇಕು. ದೇಶಭಕ್ತಿಯ ಬುನಾದಿಯೊಂದಿಗೆ ಸದೃಢ ಸಮಾಜದ ನಿರ್ಮಾಣಕ್ಕೆ ಮನಮಾಡಬೇಕು ಎಂದು ಕರೆಯಿತ್ತರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವಾರ್ಷಿಕ ವರದಿಯನ್ನು ಮಂಡಿಸಿ ಮುಂದಿನ ವರ್ಷದಿಂದ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ಗಣಿತಶಾಸ್ತ್ರ ಎಂಎಸ್ಸಿ ವಿಭಾಗವನ್ನು ಆರಂಭಿಸಲಾಗುವುದು. ಸಂಸ್ಥೆ ವರ್ಷದಿಂದ ವರ್ಷಕ್ಕೆ ರಚನಾತ್ಮಕ ರೀತಿಯನ್ನು ಅಭಿವೃದ್ಧಿಯನ್ನು ಕಾಣುತ್ತಿದೆ. ಹಾಗಾಗಿಯೇ ಯು.ಜಿ.ಸಿ ಯಿಂದ ಸೆಂಟರ್ ಆಫ್ ಪೊಟೆನ್ಶಿಯಲ್ ಫಾರ್ ಎಕ್ಸಲೆನ್ಸ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಪ್ರಸ್ತುತ ವರ್ಷ ಕಾಲೇಜಿನಲ್ಲಿ ನೂರಕ್ಕೂ ಮಿಕ್ಕ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ನುಡಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಕೃಷ್ಣ ಕಾರಂತ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ವಿದ್ಯಾರ್ಥಿ ನಾಯಕರುಗಳಾದ ಸುಹಾಸ್ ವಿ.ಶೆಟ್ಟಿ, ಶ್ರೇಯಸ್ ಕೆ ಹಾಗೂ ದೀನವಿ ಎಂ.ಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು, ವಿಶೇಷ ಸಾಧನೆಗೈದವರನ್ನು ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಕನ್ನಡ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಅವರನ್ನು ಸನ್ಮಾನಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮಂಗಳೂರಿನ ಕೆನರಾ ಕಾಲೇಜು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.
ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿದರು. ಉಪನ್ಯಾಸಕಿಯರಾದ ವಿಜಯ ಸರಸ್ವತಿ ಹಾಗೂ ರವಿಕಲಾ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ವಂದಿಸಿದರು.