ಮೌಲ್ಯವಿಲ್ಲದ ಶಿಕ್ಷಣ ಸಮಾಜದ ಗೌರವಕ್ಕೆ ಪಾತ್ರವಾಗುವುದಿಲ್ಲ – ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಪ್ರೊ.ಕೆ.ಭೈರಪ್ಪ
ಪುತ್ತೂರು: ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬದ ಶಿಕ್ಷಣಕ್ಕೆ ಯಾವುದೇ ಗೌರವ ದಕ್ಕುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ನೈತಿಕವಾಗಿ ಶ್ರೀಮಂತಗಳ್ಳುವಂತಹ ಶಿಕ್ಷಣದ ಅಗತ್ಯವಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಇಡೀ ದೇಶದಲ್ಲೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಒಂದು ಸಲಹಾ ಮಂಡಳಿಯನ್ನು ರೂಪಿಸುವತ್ತ ಯೋಚನೆ ಮಾಡಿದೆ. ವಿಶ್ವವಿದ್ಯಾನಿಲಯದ ಆಶ್ರಯದಲ್ಲಿನ ಆಯ್ದ ಪ್ರಮುಖ ಎಂಟು ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಆಡಳಿತ ಮಂಡಳಿಗಳ ತಲಾ ಒಬ್ಬರು ಸದಸ್ಯರು ಈ ಮಂಡಳಿಯಲ್ಲಿ ಕಾರ್ಯಾಚರಿಸಲಿದ್ದು ವಿಶ್ವಿವಿದ್ಯಾನಿಲಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದರಿಂದ ನೂತನ ಆಲೋಚನೆಗಳನ್ನು ಸ್ವೀಕರಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಯುವ ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗಬೇಕು. ನಿರಂತರವಾದ ಜ್ಞಾನ ಸಂಗ್ರಹಣೆಯಲ್ಲಿ ಅಧ್ಯಾಪಕರು ತೊಡಗಿಕೊಂಡರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಕಾಣಲು ಸಾಧ್ಯ. ಸಂಶೋಧನೆಗೆ ಪ್ರೇರಣೆ ಕೊಡುವ ಹಿನ್ನಲೆಯಲ್ಲಿ ಕಳೆದ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯ ವಿವಿಧ ಕಾಲೇಜುಗಳಲ್ಲಿನ ನುರಿತ ಅಧ್ಯಾಪಕರನ್ನೂ ಸಂಶೋಧನಾ ಮಾರ್ಗದರ್ಶಕರನ್ನಾಗಿ ಗುರುತಿಸುತ್ತಿದೆ. ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸುವುದಕ್ಕೆ ವಿದ್ಯಾರ್ಥಿ ವೇತನವನ್ನೂ ಒದಗಿಸಲಾಗುತ್ತದೆ ಎಂದರು.
ಮತ್ತೋರ್ವ ಅತಿಥಿ ಮೂಡಬಿದ್ರೆಯ ಪ್ರಗತಿ ಎಜುಕೇಶನ್ ಫೌಂಡೇಶನ್ ನ ಅಧ್ಯಕ್ಷೆ ಸುಜಾತ ಮುದ್ರಾಡಿ ಮಾತನಾಡಿ ಶಿಕ್ಷಣವೆಂಬುದು ಸಮಾಜವನ್ನು ಒಂದುಗೂಡಿಸುವ ಸಾಧನ. ಈ ಸಾಧನಕ್ಕೆ ಹೈಕಿಕ ಸಾಮರ್ಥ್ಯದ ಹಂಗಿಲ್ಲ. ಎಂತಹ ದೇಹ ನ್ಯೂನತೆಯಿದ್ದರೂ ಯಶಸ್ಸನ್ನು ಗಳಿಸುವುದಕ್ಕೆ ಸಾಧ್ಯ. ಬೇರೆಯವರಿಗೆ ನಾವು ಹೇಗೆ ಕಾಣಿಸುತ್ತೇವೆ ಅನ್ನುವುದು ಮುಖ್ಯವಲ್ಲ, ಬದಲಾಗಿ ಆಂತರಂಗಿಕವಾಗಿ ಹೇಗಿದ್ದೇವೆ ಅನ್ನುವುದೇ ಮುಖ್ಯ. ಯಾರೂ ಹುಟ್ಟಿನಿಂದಲೇ ಸಾಧಕರಲ್ಲ. ಸ್ವಪ್ರಯತ್ನವೊಂದೇ ಯಶಸ್ಸಿಗೆ ಮೂಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಾಮೀ ವಿವೇಕಾನಂದರಿಂದ ಪ್ರೇರಣೆ ಪಡೆಯುವಂತಾಗಭೇಕು ಎಂಬ ಆಶಯದೊಂದಿಗೆ ವಿವೇಕಾನಂದ ಕಾಲೇಜನ್ನು ಹಿರಿಯರು ಆರಂಭಿಸಿದರು. ಕೇವಲ ಪದವಿ ಪಡೆಯುವುದಷ್ಟೇ ಇಲ್ಲಿನ ವಿದ್ಯಾರ್ಥಿಗಳ ಗುರಿಯಾಗಬಾರದು ಎಂಬುದೇ ಈ ಹಿಂದಿನವರ ಕನಸಾಗಿತ್ತು. ಅದರಂತೆ ಕಾಲೇಜು ಬೆಳೆದು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಇಂಗ್ಲೆಂಡ್ನ ಐಬಿಸಿ ಕೇಂಬ್ರಿಜ್ನಿಂದ ಗೌರವ ಪ್ರಾಧ್ಯಾಪಕ ಅರ್ಹತೆಗೆ ಪಾತ್ರರಾದ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ ಅವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ರಾಜ್ಯಶ್ರೀ ಅಡ್ಯಂತಾಯ, ನಿಶ್ಮಿತಾ, ಶ್ವೇತಾ ಹಾಗೂ ಕಾರ್ತಿಕ್ ಪ್ರಭು ಅವರನ್ನು ಮಾತ್ರವಲ್ಲದೆ ವಿಶೇಷ ಸಾಧನೆಗೈದ ಎನ್.ಸಿ.ಸಿ. ವಿದ್ಯಾರ್ಥಿಗಳಾದ ವಿನಿತಾ ಬಿ.ಸಿ ಹಾಗೂ ಕಿಶೋರ್ ಎಂ.ವಿ ರನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವೇಕಾನಂದ ಜಯಂತಿ ಅಂತರ್ಕಾಲೇಜು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ವಿವಿಧ ಧತ್ತಿನಿಧಿ ಬಹುಮಾನ, ಶೈಕ್ಷಣಿಕ ಪ್ರತಿಭಾ ಪುರಸ್ಕಾರ ನಡೆಯಿತು.
ವೇದಿಕೆಯಲ್ಲಿ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಪ್ರೊ.ಕೃಷ್ಣ ಕಾರಂತ, ಡಾ.ದುರ್ಗಾರತ್ನ, ರೇಖಾ ಪಿ ಹರಿಣಿ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್ ಶೆಟ್ಟಿ, ಕಾರ್ಯದರ್ಶಿ ಪವನ್ ಕುಮಾರ್, ಜತೆ ಕಾರ್ಯದರ್ಶಿ ಪೂಜಾ ಎಂ.ಎನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಸುಕನ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿದರು. ಪ್ರೊ.ಶಂಕರ ನಾರಾಯಣ ಭಟ್ ವಂದಿಸಿದರು. ಉಪನ್ಯಾಸಕಿಯರಾದ ವಿಜಯ ಸರಸ್ವತಿ, ರೇಯಾಂಕ, ಸರಸ್ವತಿ, ಜೀವಿತಾ ಹಾಗೂ ಪ್ರಾಧ್ಯಾಪಕರುಗಳಾದ ಪ್ರೊ.ವೆಂಕಟ್ರಮಣ ಭಟ್, ಡಾ.ರೋಹಿಣಾಕ್ಷ, ಪ್ರೊ.ಶಿವಪ್ರಸಾದ್, ಡಾ.ಶ್ರೀಶ ಕುಮಾರ್ ಎಂ.ಕೆ ಕಾರ್ಯಕಮ ನಿರ್ವಹಿಸಿದರು.