ವಿವೇಕಾನಂದ ಕಾಲೇಜು : 26ರಂದು ವಾರ್ಷಿಕೋತ್ಸವ, 27ಕ್ಕೆ ಹಿರಿಯ ವಿದ್ಯಾರ್ಥಿ ಸಂಘ ದಿಣಾಚರಣೆ
ಪುತ್ತೂರು : ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗು ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ ಫೆ.೨೬ ಹಾಗೂ ೨೭ರಂದು ನಡೆಯಲಿದೆ. ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ವಹಿಸುವರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಆಗಮಿಸುವರು. ಅಂತೆಯೇ ಮೂಡಬಿದ್ರೆಯ ಪ್ರಗತಿ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷೆ ಸುಜಾತ ಮುದ್ರಾಡಿ, ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್, ಕಾಲೇಜು ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ ಉಪಸ್ಥಿತರಿರುವರು.
೨೭ರಂದು ನಡೆಯುವ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆಯಂದು ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಜ್ಞಾನೇಶ್ ಎನ್.ಎ ಹಾಗೂ ಅಡ್ಯನಡ್ಕದ ವಾರಣಾಶಿ ಫಾರ್ಮ್ಸ್ನ ಡಾ.ಅಶ್ವಿನಿ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ ವಹಿಸುವರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹಾಗೂ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿರುವರು.
ಎರಡು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ 26ರಂದು ಕಾಲೇಜಿನ ಅಧ್ಯಾಪಕ ವೃಂದದವರಿಂದ ಯಕ್ಷಗುರು ಸಬ್ಬಣಕೋಡಿ ರಾಮ ಭಟ್ ನಿರ್ದೇಶನದಲ್ಲಿ ಕರ್ಣಾರ್ಜುನ ಕಾಳಗ ಯಕ್ಷಗಾನ ಹಾಗೂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಶ್ರೀಧರ ಹೆಚ್.ಜಿ ನಿರ್ದೇಶನದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನ ನಡೆಯಲಿದೆ. 27 ರಂದು ವಿದ್ಯಾರ್ಥಿಗಳಿಂದ ’ರಾವಣೋದ್ಭವ’ ಪ್ರಸಂಗ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ’ಅತಿಕಾಯ – ಇಂದ್ರಜಿತು’ ಪ್ರಸಂಗ ಜರಗಲಿದೆ.