ಉದ್ಯೋಗ ಕ್ಷೇತ್ರಕ್ಕೆ ಕೇವಲ ಶೈಕ್ಷಣಿಕ ಅರ್ಹತೆ ಸಾಲದು : ಡಾ.ಸಿದ್ಧಿಕ್
ಪುತ್ತೂರು: ಭಾರತದ ಭವಿಷ್ಯ ವಿದ್ಯಾಥಿಗಳಲ್ಲಿ ಅಡಗಿದೆ. ಹಾಗಾಗಿ ಅತ್ಯುತ್ತಮ ಗುಣಮಟ್ಟದ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವುದು ಅಗತ್ಯ. ಉದ್ಯೋಗವನ್ನು ಪಡೆಯುವುದು ನಮಗೆ ಕಷ್ಟಕರ ಸಂಗತಿಯಾಗಿ ಪರಿಣಮಿಸದಂತೆ ತಯಾರಾಗಬೇಕಾದ ಅನಿವಾರ್ಯತೆ ಇದೆ ಎಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಅಬೂಬಕ್ಕರ್ ಸಿದ್ಧಿಕ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ವಾಣಿಜ್ಯ ಮತ್ತು ವ್ಯವಹಾರ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಉದ್ಯೋಗ ಮಾರುಕಟ್ಟೆ ಕೇವಲ ಶೈಕ್ಷಣಿಕ ಅರ್ಹತೆಯನ್ನಷ್ಟೇ ಬಯಸುತ್ತಿರುವುದಲ್ಲ. ಬದಲಾಗಿ ಆ ಅರ್ಹತೆಗಿಂತಲೂ ಮಿಗಿಲಾದ ಗುಣಮಟ್ಟ ಏನಿದೆ ಎಂಬುದನ್ನು ಎದುರು ನೋಡುತ್ತಿದೆ. ಸಂವಹನ ಕಲೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಅಂತೆಯೇ ಸಕಾರಾತ್ಮಕ ಧೋರಣೆ, ನಾಯಕತ್ವ ಗುಣ ಎಲ್ಲವೂ ಪ್ರಮುಖ ಸಂಗತಿಗಳಾಗುತ್ತಿವೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಬದುಕು ಅನ್ನುವುದೇ ಒಂದು ಆಟ. ಈ ಆಟದಲ್ಲಿ ನಾವು ಗೆಲ್ಲುವುದಕ್ಕೆ ಆದ್ಯತೆ ನೀಡಬೇಕು. ಸೋಲಿನ ಕಡೆಗೆ ನಮ್ಮನ್ನು ನಾವು ಒಯ್ಯಬಾರದು. ಗೆಲುವೊಂದೇ ಲಕ್ಷ್ಯಾದಾಗ ಗುಣಮಟ್ಟ ತನ್ನಿಂತಾನೇ ವೃದ್ಧಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಹಿಂದಿನ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಿ.ಕಾಂ ಹಾಗೂ ಬಿಬಿಎಂ ನ ಹದಿನಾರು ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್ ಪ್ರಸ್ಥಾವನೆಗೈದರು. ವಿದ್ಯಾರ್ಥಿ ಅನಂತ ಕೃಷ್ಣ ಮುಳಿಯ ಸ್ವಾಗತಿಸಿದರು. ವಿದ್ಯಾಥಿನಿ ಕಲ್ಪಿತ ವಂದಿಸಿದರು. ಉಪನ್ಯಾಸಕರುಗಳಾದ ಅಂಕಿತಾ ಹಾಗೂ ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.