ಸ್ಪರ್ಧಾತ್ಮಕ ಪರೀಕ್ಷೆ ನಾಗರಿಕ ಸೇವೆಯ ಮೌಲ್ಯವನ್ನು ಹೆಚ್ಚಿಸುತ್ತದೆ:ರಾಮ್ಕುಮಾರ್
ಪುತ್ತೂರು: ಭಾರತಕ್ಕೆ ನಾಗರಿಕ ಸೇವೆಯನ್ನು ಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯು ಮೊದಲಿಗೆ ಪರಿಚಯಿಸಿತು. ಇದಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸೇರಬಹುದು. ಯಾರಲ್ಲಿ ಪ್ರತಿಭೆಯಿದೆಯೋ ಅಂತವರು ಈ ಪರೀಕ್ಷೆಯನ್ನು ಬರೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆ ನಾಗರಿಕ ಸೇವೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಆದಾಯ ತೆರಿಗೆಯ ಮುಖ್ಯ ಆಯುಕ್ತರಾಗಿ ನಿವೃತ್ತರಾದ ರಾಮ್ಕುಮಾರ್ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ, ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನಡೆದ ನಾಗರಿಕ ಸೇವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ನಡೆದ ಒಂದು ದಿನದ ಕಾರ್ಯಗಾರದ ಉದ್ಘಾಟನಾ ಸಮಾರಂಭದದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ತಯಾರಿ ಮಾಡಿಕೊಂಡಿರಬೇಕು. ಸಮಯವನ್ನು ವ್ಯರ್ಥ ಮಾಡದಿರಿ. ಉಳಿದೆಲ್ಲಾ ಕೆಲಸಗಳನ್ನು ದೂರವಿಡಿ. ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಗಟ್ಟಿ ನಿರ್ಧಾರ ಮಾಡಿದ ನಂತರ ತಪಸ್ಸಿನಂತೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ. ತಪ್ಪುಗಳನ್ನು ಕಂಡಾಗ ತಕ್ಷಣ ಸರಿ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಕಾರ್ಯಕ್ರಮದ ಇನ್ನೊರ್ವ ಅತಿಥಿ ಭಾರತ ಸರ್ಕಾರದ ನಿವೃತ ಕಾರ್ಯದರ್ಶಿ ವಿ.ವಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತಳೆಯಬೇಕು. ಅದು ನಮ್ಮ ಸ್ಪರ್ಧಾ ಸಮಾರ್ಥ್ಯವನ್ನು ಹೆಚ್ಚಿಸುತ್ತದೆ. ಅದು ಖಂಡಿತವಾಗಿಯೂ ಉತ್ತಮ ಭವಿಷ್ಯವನ್ನು ಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸ್ಪಾರ್ಧಾತ್ಮಕ ಪರೀಕ್ಷೆ ಬೇಕಾದ ಎಲ್ಲಾ ತಯಾರಿಗಳನ್ನು ಸರಿಯಾಗಿ ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುದುಚೆರಿಯ ನಿವೃತ ಕನ್ಸರ್ವೆಟರ್ ಆಫ್ ಫಾರೆಸ್ಟ್ನ ಮುಖ್ಯಸ್ಥ ಪ್ರಕಾಶ್ ಭಟ್ ಉಪಸ್ಥಿತರಿದ್ದರು. ಈ ಕಾರ್ಯಗಾರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಮಾಧವ ಭಟ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ವ್ಯವಹಾರ ನಿರ್ವಹಣೆಯ ಉಪನ್ಯಾಸಕಿ ವಿಜಯ ಸರಸ್ವತಿ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕಿ ರೇಖಾ.ಪಿ ವಂದಿಸಿದರು.