VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದ ಪತ್ರಿಕೋದ್ಯಮ ವಿಭಾಗದ ದಶಮಾನೋತ್ಸವ ಉದ್ಘಾಟನೆ – ಪತ್ರಕರ್ತ ಖಾಸಗಿ ಬದುಕನ್ನು ಬದಿಗಿಟ್ಟು ಕೆಲಸ ಮಾಡಬೇಕು : ಭಾರತಿ ಹೆಗಡೆ

ಪುತ್ತೂರು: ಪೂರ್ವಾಗ್ರಹಕ್ಕೆ ಒಳಗಾಗದೆ ಪತ್ರಿಕೋದ್ಯಮದ ಬಗೆಗೆ ಹುಚ್ಚು ಪ್ರೀತಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುವವರು ಪತ್ರಿಕಾ ಕ್ಷೇತ್ರಕ್ಕೆ ಬೇಕಾಗಿದ್ದಾರೆ. ಪತ್ರಕರ್ತ ವಿವಿದ ಘಟನೆಗಳಿಗೆ ವೈಯಕ್ತಿಕವಾಗಿ ತನ್ನ ಭಾವನೆಯನ್ನು ವ್ಯಕ್ತಪಡಿಸಬಹುದಾದರೂ ಬರವಣಿಗೆಯಲ್ಲಿ ಭಾವ ವ್ಯಕ್ತ ಆಗಬಾರದು. ಖಾಸಗಿ ಬದುಕನ್ನು ಪಕ್ಕಕ್ಕಿಟ್ಟು ಕಾರ್ಯನಿರ್ವಹಿಸಲು ತಯಾರಾಗಿದ್ದರೆ ಮಾತ್ರ ಉತ್ತಮ ಪತ್ರಕರ್ತನಾಗಿ ಬೆಳೆಯಲು ಸಾಧ್ಯ ಎಂದು ವಿಜಯವಾಣಿಯ ಸುದ್ದಿ ಸಂಪಾದಕಿ ಭಾರತಿ ಹೆಗಡೆ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ದಶಮಾನೋತ್ಸವ ಹಾಗೂ ಪತ್ರಿಕೋದ್ಯಮ ಇಂದು ನಾಳೆ ಎಂಬ ವಿಷಯದ ಬಗೆಗಿನ ರಾಜ್ಯಮಟ್ಟದ ಮಾಧ್ಯಮಗೋಷ್ಠಿಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

News Photo - Journalism Inauguration

ವಿಷಯದ ಎಳೆಯೊಂದನ್ನು ಹಿಡಿದುಕೊಂಡು ಮುಂದುವರಿದಾಗ ವಿವಿಧ ಬರಹಗಳನ್ನು ಬರೆಯುವಷ್ಟು ಒಳನೋಟಗಳು ಕಾಣಿಸುವುದೂ ಇದೆ. ಪತ್ರಕರ್ತನಾದವನಿಗೆ ಈ ಸೂಕ್ಷ್ಮತೆಯನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಜನರ ಬಳಿಗೆ ಹೋಗುವ ಅವಕಾಶ ಪತ್ರಕರ್ತರಿಗೆ ದೊರಕಿದೆ. ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುವ ಸಾಧ್ಯತೆಯನ್ನು ಸಾಕಾರಗೊಳಿಸಿದೆ. ಹಾಗಾಗಿ ಪತ್ರಿಕೋದ್ಯಮಕ್ಕೆ ಅಡಿಯಿಡುವುದು ಪುಣ್ಯದ ಕೆಲಸ ಎಂಬುದನ್ನು ಮನಗಾಣಬೇಕು. ನಾವು ಮಾಡುವ ಕೆಲಸ ಪತ್ರಿಕೋದ್ಯಮದಲ್ಲಿ ನಮ್ಮನ್ನು ಕಾಯುತ್ತದೆ ಎಂದರು.

ಪಠ್ಯದಲ್ಲಿ ಓದುವ ಪತ್ರಿಕೋದ್ಯಮಕ್ಕೂ ಪ್ರಾಯೋಗಿಕ ಪತ್ರಿಕೋದ್ಯಮಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪತ್ರಿಕಾಲಕ್ಕೆ ಬಂದ ಮೇಲಷ್ಟೇ ನಿಜವಾದ ಪತ್ರಿಕೋದ್ಯಮದ ಆಳ ಅಗಲ ಅರ್ಥವಾಗಲು ಸಾಧ್ಯ. ಕೆಲವೊಮ್ಮೆ ಸಮಾಜದ ಗಣ್ಯರೆನಿಸಿದವರು ಗತಿಸಿಹೋದಾಗ, ಪ್ರಮುಖ ಘಟನೆಗಳು ಜರುಗಿದಾಗ ಪತ್ರಿಕಾಲಯದಲ್ಲಿ ಹೊಸ ವಾತಾವರಣ ಆವರಿಸಿಕೊಳ್ಳುತ್ತದೆ. ನಿಗದಿತ ಸಮಯಕ್ಕನುಗುಣವಾಗಿ ಕಛೇರಿಯಿಂದ ಮನೆಗೆ ತೆರಳಲು ಸಾಧ್ಯವಾಗುವುದಿಲ್ಲ. ಹಾಗಾಘಿ ಪತ್ರಕರ್ತನಿಗೆ ಸಮಯದ ಹಂಗನ್ನು ಮೀರಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಕಾರ್ತಿಕ್ ಎನ್.ಜೆ ರೂಪಿಸಿದ ದಶಮಾನೋತ್ಸವದ ಲಾಂಘನವನ್ನು ಬಿಡುಗಡೆಗೊಳಿಸಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ರ್ಶರೀನಿವಾಸ ಪೈ ಮಾತನಾಡಿ ಹತ್ತು ವರ್ಷಗಳ ಹಿಂದೆ ಪತ್ರಿಕೋದ್ಯಮ ವಿಭಾಗದ ಬಗೆಗೆ ಯಾವ ಕನಸನ್ನು ಕಾಣಲಾಗಿತ್ತೋ ಆ ಆಶಯಗಳನ್ನು ವಿಭಾಗ ಸಾಕಾರಗೊಳಿಸುತ್ತಿರುವುದು ಸಂಭ್ರಮದ ವಿಚಾರ. ಅನೇಕ ಅತ್ಯುತ್ತಮ ಕಾರ್ಯಗಳನ್ನು ವಿಭಾಗ ನಡೆಸಿಕೊಟ್ಟಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಪತ್ರಿಕೆಯ ವ್ಯವಹಾರ ಉದ್ಯಮವಾಗಬಾರದು. ಬದಲಾಗಿ ಪತ್ರಿಕಾ ಧರ್ಮವಾಗಬೇಕು. ಸತ್ಯಾಸತ್ಯತೆಯನ್ನು ವಿಶ್ಲೇಷಿಸಿ ಬರೆಯುವ ಜವಾಬ್ಧಾರಿ ಪತ್ರಕರ್ತರ ಮೇಲಿದೆ. ರಾಷ್ಟ್ರಕ್ಕೆ ಶಕ್ತಿಯನ್ನು ತುಂಬುವ ಕಾಯಕದಲ್ಲಿ ಪತ್ರಕರ್ತರು ತೊಡಗಬೇಕೇ ವಿನಃ ದೇಶವನ್ನು ದುರ್ಬಲಪಡಿಸುವ ಕೆಲಸಕ್ಕೆ ಇಳಿಯಬಾರದು. ಇಡಿಯ ಜಗತ್ತಿನ ಹಿತವನ್ನು ಕಾಯುವ ಜವಾಬ್ಧಾರಿ ಪತ್ರಕರ್ತರ ಮೇಲಿದೆ ಎಂದರು.

ಇಂದು ಭಯೋತ್ಪಾದನೆಯನ್ನೂ ಸ್ವಾತಂತ್ರ್ಯ ಹೋರಾಟದ ತೆರನಾಗಿ ಬಿಂಬಿಸಲಾಗುತ್ತಿದೆ. ಈ ಬಗೆಗೆ ಪತ್ರಕರ್ತರು ನಿಜಕ್ಕೂ ಚಿಂತಿಸಬೇಕಾದ ಅಗತ್ಯವಿದೆ. ಪತ್ರಕರ್ತನ ಲೇಖನಿಯಲ್ಲಿ ಅಪಾರ ಶಕ್ತಿಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಭಾರತವನ್ನು ಉತ್ಕೃಷ್ಟತೆಗೇರಿಸುವ ಯೋಗ್ಯತೆ ಪತ್ರಕರ್ತರಲ್ಲಿದೆ ಎಂದರಲ್ಲದೆ ಪತ್ರಕರ್ತರಾಗುವವರು ಎಲ್ಲರನ್ನೂ ಸ್ವೀಕರಿಸಬೇಕು ಃಆಗೆಂದು ಯಾರನ್ನೂ ಅನುಕರಿಸಬಾರದು ಎಂದು ಸಲಹೆ ನೀಡಿದರು.

ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್ ಶುಭ ಹಾರೈಸಿದರು. ವಿದ್ಯಾರ್ಥಿನಿ ಪ್ರಥಮಾ ಉಪಾಧ್ಯಾಯ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.