VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ದೀಪ ಪ್ರಜ್ವಲನದಿಂದ ಕೃಷ್ಣ ಶಕ್ತಿಯ ಕೇಂದ್ರೀಕರಣ: ಬಿ. ರಾಮ್ ಭಟ್

ಪುತ್ತೂರು: ದೀಪ ಪ್ರಜ್ವಲನಕ್ಕೆ ಸನಾತನ ಧರ್ಮದಲ್ಲಿ ಉನ್ನತ ವ್ಯಾಖ್ಯಾನವಿದೆ. ಬ್ರಹ್ಮಾಂಡದಲ್ಲಿರುವ ದೇವ ದೇವತೆಯರನ್ನು ತಮ್ಮ ಮನೆಯಂಗಳಕ್ಕೆ ಕರೆತರಲು ದೀಪದಿಂದ ಸಾಧ್ಯ. ಮನೆಯ ಅಂಗಳದ ತುಳಸಿ ಕಟ್ಟೆಯಲ್ಲಿ ದೀಪ ಪ್ರಜ್ವಲನ ಮಾಡುದರಿಂದ ಕೃಷ್ಣ ಶಕ್ತಿಯ ಕೇಂದ್ರಿಕರಣ ವಾಗುತ್ತದೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ನಿವೃತ್ತ ಉಪತಹಶೀಲ್ದಾರ ಮತ್ತು ಸುಳ್ಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ಬಿ ರಾಮ ಭಟ್ ತಿಳಿಸಿದರು.

ಅವರು ಇತ್ತೀಚೆಗೆ ವಿವೇಕಾನಂದ ಕಾಲೇಜಿನಲ್ಲಿ  ಶ್ರೀಗುರು ಪೂರ್ಣಿಮ ಆಚರಣೆ, ವಿಕಾಸಂ ಸಂಸ್ಕೃತ ಸಂಘ ಮತ್ತು ಶ್ರೀ ಸುರಸರಸ್ವತೀ ಸಭಾ ಸಂಸ್ಕೃತ ಪರೀಕ್ಷಾ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಬೆಳಕಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ ಆದರೆ ದೇವರು ನಮಗೆ ದೀಪದ ಮೂಲಕ ಬೆಳಕನ್ನು ನೀಡಿದ್ದಾನೆ. ದೀಪಜ್ಯೋತಿಯಲ್ಲಿ ತ್ರಿಮೂರ್ತಿಗಳ ಸ್ವರೂಪ ಕಾಣಬಹುದು. ಆ ಜ್ಯೋತಿಯ ಬಳಿ ಬ್ರಹ್ಮಾಂಡದ ಎಲ್ಲಾ ದೇವತೆಗಳೂ ಸ್ಥಾಪಿತರಾಗುತ್ತಾರೆ. ಅವರು ಅಂಧಕಾರ ನಾಶಮಾಡಿ ಸುಜ್ಞಾನ ವೃದ್ಧಿಯಾಗುವಂತೆ ಆಶೀರ್ವದಿಸುತ್ತಾರೆ ಎಂದು ತಿಳಿಸಿದರು.

ಗುರುವಿನ ಮಹತ್ವದ ಬಗೆಗೆ ತಿಳಿಸುತ್ತಾ, ಚಿನ್ನದ ಗಣಿಯಲ್ಲಿ ಸಿಗುವ ಬಂಗಾರ ಮಣ್ಣಾಗಿ ಕೊಳೆಯಾಗಿರುತ್ತದೆ. ನಂತರ ಅದನ್ನು ಸಂಸ್ಕರಿಸಿದಾಗ ಧರಿಸಲು ಯೋಗ್ಯವಾದ ಚಿನ್ನವಾಗಿ ಮಾರ್ಪಾಡಾಗುತ್ತದೆ. ಅಂತೆಯೇ ನಮ್ಮನ್ನು ಸಂಸ್ಕರಿಸುವ ಕೆಲಸವನ್ನು ಗುರು ಮಾಡುತ್ತಾನೆ. ಮನುಷ್ಯನಾಗಿ ಹುಟ್ಟದವನು ಆಧ್ಯಾತ್ಮದ ಅಧ್ಯಯನಮಾಡಿ ಮೋಕ್ಷ ಪಡೆಯಲು ಗುರು ಸಹಾಯ ಮಾಡುತ್ತಾನೆ. ಗುರುಗಳಿಲ್ಲದೆ ಜಗತ್ತಿನಲ್ಲಿ ಯಾವುದೂ ಇಲ್ಲ. ಗುರು ತತ್ವ ಎಂಬುದು ಒಂದೆ. ಗುರು ಪೂರ್ಣಿಮೆಯ ದಿನದಂದು ಗುರುತತ್ವ ಭೂಮಿಗೆ ಆಕರ್ಷಿಸಲ್ಪಡುತ್ತದೆ ಎಂದರು.

ಸಂಸ್ಕೃತ ವಿಷಯವಾಗಿ ಮಾತನಾಡಿ ಸಂಸ್ಕೃತ ದೇವಭಾಷೆ. ಅದು ಎಲ್ಲಾ ಭಾಷೆಗಳ ತಾಯಿ. ಒಂದು ಆಯುರ್ವೇದ ವಸ್ತುವಿನ ಹೆಸರು ತಿಳಿಯದಿದ್ದಾಗ ಅದರ ಸಂಸ್ಕೃತ ಪದ ಹೇಳಿದಾಕ್ಷಣ ತಿಳಿಯುತ್ತದೆ. ಅದೇ ಸಂಸ್ಕೃತ ಇಂದು ಮೃತ ಭಾಷೆಯಾಗಿದೆ. ಸರಕಾರ ಕೂಡ ಅದರ ಬಗೆಗೆ ಗಮನ ಹರಿಸುತ್ತಿಲ್ಲ. ಅದನ್ನು ಬೆಳೆಸುವ ಕೆಲಸವಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ  ನಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಗುರು ಬೇಕು. ನಮ್ಮೊಳಗಿನ ಪ್ರತಿಭೆಯನ್ನು ಹೊರತರುವ ಕೆಲಸ ಗುರು ಮಾಡುತ್ತಾನೆ. ಅವನು ದಯೆಯ ಸ್ವರೂಪವೇ ಹೊರತು ವಿದ್ಯಾವಂತ ಭಯೋತ್ಪಾಕನಲ್ಲ ಎಂದು ಕಾರ್‍ಯಕ್ರಮದ ಅಧ್ಯಕ್ಷ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ತಿಳಿಸಿದರು.

ಸಂಸ್ಕೃತ ವಿಭಾಗದ ಮುಖ್ಯಸ್ಥೆ ಉಮಾದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಕಾಸಂ ಸಂಸ್ಕೃತ ಸಂಘದ ಅಧ್ಯಕ್ಷ, ವಿದ್ಯಾರ್ಥಿ ನಟರಾಜ ಜೋಯಿಸ ಸ್ವಾಗತಿಸಿದರು. ವಿದ್ಯಾರ್ಥಿ ಈಶ್ವರ ಶರ್ಮ ವಂದಿಸಿದರು. ಪೌಶಾ ಭಟ್ ಪ್ರಾರ್ಥಿಸಿದರು. ಸ್ಮಿತಾ ಪಾರ್ವತಿ ಎಸ್ ಕಾರ್‍ಯಕ್ರಮ ನಿರೂಪಿಸಿದರು. ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ ಎಂ.ಕೆ. ಕಾರ್ಯಕ್ರಮವನ್ನು ಸಂಯೋಜಿಸಿದರು.