’ಸೋಲನ್ನು ಮೆಟ್ಟಿ ನಿಂತು ಯಶಸ್ಸನ್ನು ನಮ್ಮದಾಗಿಸಬೇಕು’ – ವಿವೇಕಾನಂದ ಕಾಲೇಜು ವಾರ್ಷಿಕೋತ್ಸವದಲ್ಲಿ ಡಾ.ಎಡಪಡಿತ್ತಾಯ
ಪುತ್ತೂರು: ಸೋಲನ್ನು ಮೆಟ್ಟಿ ನಿಂತು ಯಶಸ್ಸನ್ನು ಗಳಿಸುವ ಸಂಕಲ್ಪ ಕೈಗೊಂಡಾಗ ಮಾತ್ರ ಸಾಧನೆ ಒಲಿಯುವುದಕ್ಕೆ ಸಾಧ್ಯ. ಸೋಲಿನಿಂದ ಪಾಠ ಕಲಿಯದವನು ಬದುಕಿನಲ್ಲಿ ಮುಂದೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಡಾ.ಪಿ.ಎಸ್.ಎಡಪಡಿತ್ತಾಯ ಹೇಳಿದರು.
ಅವರು ಶುಕ್ರವಾರ ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸುವರ್ಣ ಮಹೋತ್ಸವ ಸಂದರ್ಭದ ಮೂರನೇ ದಿನದ ಕಾರ್ಯಕ್ರಮವಾದ ಪದವಿ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾಥಿಗಳು ಇಂದು ಯಶಸ್ಸಿಗೆ ಸುಲಭ ಹಾಗೂ ಹತ್ತಿರದ ಹಾದಿಯನ್ನು ಹುಡುಕುತ್ತಿರುವುದು ಕಂಡು ಬರುತ್ತಿದೆ. ಆದರೆ ಸರಿಯಾಗಿ ಶ್ರಮ ವಹಿಸಿ ಗಳಿಸಿದ ಯಶಸ್ಸು ಮಾತ್ರ ಶಾಶ್ವತವಾಗಿರುತ್ತದೆ. ಉಳಿದ ಬಗೆಯಲ್ಲಿ ಗಳಿಸಿದ ಗಳಿಕೆ ಕೇವಲ ಮರೀಚಿಕೆಯಾಗಿಯಷ್ಟೇ ಇರುತ್ತದೆ. ಸಾಧನೆಗೆ ಬಡತನ, ಸಿರಿವಂತಿಕೆ, ಸ್ಥಾನಮಾನ ಯಾವುದೂ ಅಡ್ಡಿಯಾಗುವುದಿಲ್ಲ. ಹಾಗಾಗಿ ಅದ್ಭುತ ಗುರಿಯೊಂದಿಗೆ ಕಾರ್ಯತತ್ಪರರಾಗಬೇಕು ಎಂದರು.
ಯುವಜನತೆ ನೈಜಗುರಿಯನ್ನು ಮರೆತು ವ್ಯವಹರಿಸುವುದನ್ನು ಕಾಣುವಾಗ ದುಃಖವಾಗುತ್ತದೆ. ಆದ್ದರಿಂದ ಪಾಶ್ಚಾತ್ಯ ಅಂಧಾನುಕರಣೆ ಮರೆತು ಸ್ವಂತಿಕೆಯನ್ನು ಮೆರೆಯಬೇಕು. ಹಿಂದಿನ ಕಾಲದಂತೆ ಪ್ರಶ್ನೆಗೆ ಉತ್ತರ ಬರೆಯುವ ಸಂದರ್ಭ ಈಗಿನದಲ್ಲ. ಬದಲಾಗಿ ಉತ್ತರವನ್ನು ಪ್ರಶ್ನೆಸುವ ಮನೋಭಾವ ಬೆಳೆಸಿಕೊಂಡು ವೈಚಾರಿಕ ಸಿರಿವಂತಿಕೆಯನ್ನು ಪಡೆಯಬೇಕು. ತರಗತಿ ವಿಚಾರ ವಿನಿಮಯದ ಕೇಂದ್ರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ದಿನಗಳಲ್ಲಿ ವಿದ್ಯೆ ಮತ್ತು ಬುದ್ಧಿ ಜತೆಜತೆಯಾಗಿ ಸಾಗುತ್ತಿಲ್ಲ. ಹಾಗಾಗಿಯೇ ಹೆಚ್ಚಿನ ಮಂದಿ ಕೇವಲ ಪದವೀಧರರಾಗುತ್ತಿದ್ದೇವೆಯೇ ವಿನಃ ಉತ್ತಮ ಉದಾತ್ತ ವ್ಯಕ್ತಿಗಳಾಗುತ್ತಿಲ್ಲ. ಆದರೆ ವಿವೇಕಾನಂದದಂತಹ ಸಂಸ್ಥೆಯಿಂದ ಹೊರ ಬರುವ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಕಾಣುವುದಕ್ಕೆ ಸಾಧ್ಯವಾಗುತ್ತಿದೆ ಎಂದು ನುಡಿದರು.
ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ರಾಮ ಭಟ್ ಮಾತನಾಡಿ ವಿವೇಕಾನಂದರ ಸಂದೇಶವನ್ನು ಸಮಾಜದ ಉದ್ದಗಲಕ್ಕೆ ಪಸರಿಸುವ ಕಾಯಕವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ತನ್ನ ಐವತ್ತೊಂದು ಸಂಸ್ಥೆಗಳ ಮೂಲಕ ನಿತ್ಯ ನಿರಂತರವಾಗಿ ನಡೆಸುತ್ತಿದೆ ಎಂದರಲ್ಲದೆ ನಾಯಕರು ಯೋಜಕರಾಗಬೇಕಾದ ಅನಿವಾರ್ಯತೆಯಿದೆ. ಹಾಗಾದಾಗ ಮಾತ್ರ ಭಾರತ ಜಗದ್ವಂದ್ಯವಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಮಾತನಾಡಿ ತನ್ನನ್ನು ಸೊಗಸಾಗಿಸುವವರ ಪ್ರಕ್ರಿಯೆಗೆ ಒಬ್ಬಾತ ಒಗ್ಗಿಕೊಳ್ಳದಿದ್ದರೆ ಅದ್ಭುತವಾದ ಫಲಿತಾಂಶವಾಗಿ ಹೊರಬರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ವಿದ್ಯಾಸಂಸ್ಥೆಗೆ ಬರುವಾಗ ಕಚ್ಚಾ ವಸ್ತುವಿನಂತಿರುತ್ತಾರೆ. ಇಲ್ಲಿನ ವ್ಯಕ್ತಿತ್ವ ವರ್ಧಕ ವ್ಯವಸ್ಥೆಗೆ ಹೊಂದಿಕೊಂಡು ಮುಂದುವರಿದಾಗ ಅತ್ಯುತ್ತಮ ನಾಗರಿಕರಾಗಿ ಹೊರಬರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ೨೦೧೩-೧೪ನೇ ಸಾಲಿನಲ್ಲಿ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಾದ ನಿರಂಜನ್, ವಿಜಯ ಎಂ.ಎಚ್, ಪ್ರಜ್ಞಾ ಶೆಟ್ಟಿ ಹಾಗೂ ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಶೋಭಿತ್ ಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು. ವಿವಿಧ ರಂಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ವಾರ್ಷಿಕ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ, ಸಂಚಾಲಕ ಜಯರಾಮ ಭಟ್ ಎಂ.ಟಿ, ವಿದ್ಯಾರ್ಥಿ ಕ್ಷೇಮಪಾಲಕರುಗಳಾದ ಪ್ರೊ.ಕೃಷ್ಣ ಕಾರಂತ, ಡಾ.ವಿಘ್ನೇಶ್ವರ ವರ್ಮುಡಿ, ಹರಿಣಿ ಹಾಗೂ ರವಿಕಲಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಿಧೀಶ್ ಉಡುಪ, ನಿರೋಶ್ ಪಿ.ಜಿ ಹಾಗೂ ಸ್ವಾತಿ ಆಚಾರ್ಯ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ನಿಶಾ, ಶ್ರೀ ದೇವಿ ಪಿ.ಆರ್,ಶೃತಿ ಕೆ, ರೂಪಶ್ರೀ, ಸುಕನ್ಯಾ, ಸ್ಮಿತಾ ಮಾಧವಿ, ಸುಜನಶ್ರೀ ಹಾಗೂ ಅಕ್ಷತಾ ಎಸ್ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ವಾರ್ಷಿಕ ವರದಿ ವಾಚಿಸಿದರು. ಪ್ರಾಧ್ಯಾಪಕರಾದ ಪ್ರೊ.ಆನಂದ ಸ್ವಾಗತಿಸಿ, ಡಾ.ವಿಘ್ನೇಶ್ವರ ವರ್ಮುಡಿ ವಂದಿಸಿದರು. ಪ್ರಾಧ್ಯಾಪಕರುಗಳಾದ ಪ್ರೊ.ಶಂಕರ ನಾರಾಯಣ ಭಟ್, ಡಾ.ಶ್ರೀಧರ ಎಚ್.ಜಿ, ಪ್ರೊ.ವೆಂಕಟರಮಣ ಭಟ್, ಪ್ರೊ.ಶ್ರೀಕೃಷ್ಣ ಗಣರಾಜ ಭಟ್, ಪ್ರೊ.ಶಿವ ಪ್ರಸಾದ್, ಸುಪ್ರಭಾ ಕಾರ್ಯಕ್ರಮ ನಿರ್ವಹಿಸಿದರು.