ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ಶನಿವಾರ ಅತ್ಯಂತ ಸೌಹಾರ್ದಯುತವಾಗಿ ನಡೆದು ಮಾದರಿಯೆನಿಸಿತು. ಯಾವುದೇ ಆತಂಕ, ಉದ್ವೇಗಕ್ಕೆ ಅವಕಾಶವಿಲ್ಲದಂತೆ ಅವಿರೋಧ ಆಯ್ಕೆ ನಡೆದು ವಿಶೇಷವೆನಿಸಿತು. ಕಳೆದ ಹಲವಾರು ವರ್ಷಗಳಲ್ಲೇ ಈ ರೀತಿ ಅವಿರೋಧ ಆಯ್ಕೆ ನಡೆದದ್ದು ಇದೇ ಮೊದಲೆನಿಸಿ ದಾಖಲೆಗೆ ಕಾರಣವಾಯಿತು. ಅಧ್ಯಕ್ಷರಾಗಿ ಅಂತಿಮ ಬಿ.ಕಾಂ ಸಿ ವಿಭಾಗದ ಭಗತ್, ಕಾರ್ಯದರ್ಶಿಯಾಗಿ ಅಂತಿಮ ಬಿ.ಎ ಯ ಪಂಕಜ್ ಎ.ಸಿ ಹಾಗೂ ಜತೆ ಕಾರ್ಯದರ್ಶಿಯಾಗಿ ಅಂತಿಮ ಬಿ.ಎಸ್ಸಿ, ಬಿಝೆಡ್ಸಿ ಯ ಮೋಕ್ಷಿತಾ ಎಂ ಒಕ್ಕೊರಲ ಆಯ್ಕೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ನಾಯಕರಿಗೆ ಸ್ವಂತಿಕೆ ಇರೇಕು. ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡಿರಬೇಕು. ಕಾರ್ಯನಿಷ್ಟತೆ, ಕಾರ್ಯತತ್ಪರತೆ, ಪ್ರಾಮಾಣಿಕತೆಯೇ ಮೊದಲಾದ ಗುಣಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ. ನಮ್ಮ ಬದುಕು ಕೇವಲ ಜೀವನವೆನಿಸದೆ ಮೌಲ್ಯಗಳ ಕೇಂದ್ರವಾಗಬೇಕು. ಮನುಷ್ಯ ಹಾಗೂ ಮನುಷ್ಯತ್ವದ ನಡುವಣ ವ್ಯತ್ಯಾಸವನ್ನರಿತು ನಾಯಕತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ಇತ್ತರು.
ಯಾರೂ ಕೂಡ ಮತ್ತೊಬ್ಬರಿಂದಾಗಿ ಕೆಟ್ಟವರಾಗುವುದಿಲ್ಲ. ಹೇಗೆ ಕಬ್ಬಿಣವನ್ನು ಮತ್ತೊಂದು ವಸ್ತು ಹಾಳು ಮಾಡಲಾರದೋ ಹಾಗೆಯೇ ನಮ್ಮ ವ್ಯಕ್ತಿತ್ವವನ್ನೂ ಮತ್ತೊಬ್ಬರು ಹಾಳುಗೆಡವಲಾರರು. ಕಬ್ಬಣ ತನ್ನಲ್ಲೇ ಉಂಟಾಗುವ ತುಕ್ಕಿನಿಂದಾಗಿ ಕೆಡುತ್ತದೆ. ಅಂತೆಯೇ ಮನುಷ್ಯನೂ ತನ್ನದೇ ಗುಣಗಳಿಂದಾಗಿ ಕೆಡುವ ಸಾಧ್ಯತೆ ಇದೆ. ಈ ಬಗೆಗೆ ಜಾಗರೂಕತೆಯಿಂದ ಇದ್ದು ಸಂಸ್ಥೆಯ ಉನ್ನತಿಗೆ ಕಾರಣರಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲಕರುಗಳಾದ ಪ್ರೊ.ಕೃಷ್ಣ ಕಾರಂತ್, ಕ್ಯಾ.ಡಿ.ಮಹೇಶ್ ರೈ, ವೆಂಕಟ್ರಮಣ ಭಟ್, ಹರಿಣಿ ಪುತ್ತೂರಾಯ, ರೇಖಾ, ಮೋತಿ ಬಾ ಚುನಾವಣ ಪ್ರಕ್ರಿಯೆಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಟ್ಟರು. ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಚುನಾವಣೆಗೆ ಸಹಕರಿಸಿದರು.