ವಿವೇಕಾನಂದದಲ್ಲಿ ದತ್ತಿನಿಧಿ ಪ್ರದಾನ ಕಾರ್ಯಕ್ರಮ
ಪುತ್ತೂರು: ಕಾಯಕವೇ ಕೈಲಾಸ. ಕೆಲಸವನ್ನು ಮಾಡುತ್ತಾ ನಮ್ಮ ಜೀವನವನ್ನು ಕಳೆಯಬೇಕು. ಕೆಲಸ ಮಾಡುವುದರಿಂದ ಜೀವನ ಸುಗಮವಾಗಿರುತ್ತದೆ. ನಾವು ಕೆಲಸ ಮಾಡಿದಷ್ಟು ನಮ್ಮಲ್ಲಿ ಅನುಭವಗಳು ಹೆಚ್ಚುತ್ತವೆ. ನಿಸ್ವಾರ್ಥದಿಂದ ಮಾಡಿದ ಯಾವುದೇ ಕೆಲಸ ಬಹು ಬೇಗ ಫಲ ಕೊಡುತ್ತದೆ ಎಂದು ಹಿರಿಯ ಕೃಷಿಕ ಪಡಾರು ನಾರಾಯಣ ಭಟ್ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಶ್ರೀ ಉಮಾಮಹೇಶ್ವರ ದೇವರು ಪಡಾರು ದತ್ತಿನಿಧಿ, ದಿ.ಬಡೆಕ್ಕಿಲ ಸೀತಾರಾಮ ಭಟ್ ಲಕ್ಷ್ಮಿಅಮ್ಮ ಸ್ಮರಣಾರ್ಥ ದತ್ತಿನಿಧಿ ವಿದ್ಯಾರ್ಥಿ ವೇತನ ಹಾಗೂ ದಿ. ಪಡೀಲ್ ಶಂಕರ್ ಭಟ್ ದತ್ತಿನಿಧಿ ಬಹುಮಾನಗಳ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೆಚ್ಚು ಹೆಚ್ಚು ಕೆಲಸ ಮಾಡುವುದರಿಂದ ನಮ್ಮಲ್ಲಿ ಅನುಭವದ ಜೊತೆಗೆ ಜ್ಞಾನವೂ ಹೆಚ್ಚುತ್ತದೆ. ಜ್ಞಾನವೇ ಸರಸ್ವತಿ. ನಮ್ಮ ಕೆಲಸದಿಂದ ಸಿಗುವ ಯಶಸ್ಸನ್ನು ಸಮಾಜಕ್ಕೆ ಅರ್ಪಿಸಬೇಕು. ಕೆಲಸವನ್ನು ಕಲಿತಾಗ ನಮ್ಮ ಬುದ್ಧಿ ಮತ್ತು ಸ್ವಾಭಾವ ಬದಲಾಗುತ್ತದೆ. ನಾವು ಗಳಿಸಿದ ಸಂಪತ್ತನ್ನು ಸದ್ವಿನಿಯೋಗ ಮಾಡಬೇಕು. ಪ್ರತಿ ಕೆಲಸವನ್ನು ಪ್ರಾರಂಭಿಸುವ ಮೊದಲು ದೇವರನ್ನು ಯಾವಾಗಲೂ ಸ್ತುತಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಇನ್ನೊರ್ವ ಅತಿಥಿ ಡಾ.ಶ್ರೀಧರ ಭಟ್ ಬಿ. ಮಾತನಾಡಿ, ಶಿಕ್ಷಣ ಪಡೆಯುವ ಉದ್ದೇಶ ಕೇವಲ ಹಣ ಸಂಪಾದನೆಯಾಗಿರಬಾರದು. ನಮ್ಮ ವೃತ್ತಿಯಲ್ಲಿ ನಮಗೆ ಆತ್ಮ ತೃಪ್ತಿಯಿರಬೇಕು. ಮನುಷ್ಯನ ಇತಿಹಾಸದಲ್ಲಿ ವಿಜ್ಞಾನ ಬಹಳ ಗಾಢವಾಗಿ ಪರಿಣಾಮ ಬೀರುತ್ತದೆ. ಒಂದು ಬೆಂಬಲದ ಮಾತು, ಒಂದು ಪ್ರೋತ್ಸಾಹದ ನುಡಿಯಿದ್ದರೆ ಏನನ್ನೂ ಸಾಧಿಸಬಹುದು. ಆರ್ಥಿಕ ಅಡಚಣೆ ವಿದ್ಯಾರ್ಥಿಗಳಿಗೆ ಆಗಬಾರದೆಂಬ ಕಾರಣದಿಂದ ದತ್ತಿನಿಧಿಗಳನ್ನು ನೀಡಲಾಗುತ್ತಿದೆ ಎಂದರು.
ಇನ್ನೋರ್ವ ಅತಿಥಿ ಹಾರೆಕೆರೆ ನಾರಾಯಣ ಭಟ್ ಪಿ. ಮಾತನಾಡಿ, ಸ್ಪರ್ಧೆಗಳು ಬೆಳೆದಂತೆ ನಮ್ಮಲ್ಲಿ ಮೌಲ್ಯಗಳೂ ವೃದ್ಧಿಯಾಗುತ್ತವೆ. ಪ್ರಾಮಾಣಿಕ ಪ್ರಯತ್ನವಿದ್ದರೆ ಭವಿಷ್ಯ ಸುಗಮವಾಗಿರುತ್ತದೆ. ವಿದ್ಯಾರ್ಥಿಗಳು ಜೀವನ ಮೌಲ್ಯವನ್ನು ಬೆಳೆಸಿಕೊಳ್ಳಬೇಕು. ಹಾಗೂ ಸಂಸ್ಕೃತಿಯನ್ನು ಉಳಿಸುವತ್ತ ಕ್ರೀಯಾಶೀಲರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ ನಾರಾಯಣ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ದತ್ತಿನಿಧಿಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಜಾಗೃತಿಯಿದ್ದಾಗ ಜೀವನದಲ್ಲಿ ಸಫಲರಾಗಲು ಸಾಧ್ಯ ಎಂದು ಹೇಳಿದರು.