ಆಂಗ್ಲ ಭಾಷೆಯ ಬಗೆಗೆ ಭಾರತೀಯರಲ್ಲಿ ಆಸಕ್ತಿ: ಪ್ರೊ. ರಾಜಲಕ್ಷ್ಮಿ ನರಸಜ್ಜನ್
ಪುತ್ತೂರು: ಬ್ರಿಟಿಷರು ನಮಗೆ ಆಂಗ್ಲ ಭಾಷೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇದು ಒಂದು ದೇಶದ ಸಂಸ್ಕೃತಿಯನ್ನು ತಿಳಿಯುವ ಸಾಧಕವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಯದ ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಪ್ರೊ. ರಾಜಲಕ್ಷ್ಮಿ ನರಸಜ್ಜನ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಇಂಗ್ಲಿಷ್ ವಿಭಾಗ ಮತ್ತು ಲಿಟರರಿ ಸಂಘದ ಆಶ್ರಯದಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯ ಭಾರತೀಕರಣ ಎಂಬ ವಿಷಯದ ಕುರಿತು ಮಾತನಾಡಿದರು.
ಬ್ರಿಟಿಷರು ಹಾಗೂ ಭಾರತೀಯರ ನಡುವೆ ಅಂತರವಿದ್ದರೂ ಆಂಗ್ಲಭಾಷೆಯನ್ನು ಮಾತನಾಡಲು ಇಲ್ಲಿಯ ಮಂದಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ನಮ್ಮ ದೇಶದ ಬೆಳವಣಿಗೆಗೂ ಇಂಗ್ಲಿಷ್ ಸಾಕ್ಷಿಯಾಗಿದೆ. ಆಂಗ್ಲಬಾಷೆಯು ವಿವಿಧ ದೇಶಗಳ ನಡುವೆ ಸಂವಹನ ನಡೆಸಲು ಸಹಕಾರಿಯಾಗಿದೆ. ಇಂಗ್ಲಿಷ್ನಿಂದಾಗಿ ಭಾರತೀಯ ಸಂಸ್ಕೃತಿಯ ಕೆಲವು ಪದಗಳು ಆಕ್ಸ್ಫರ್ಡ್ ನಿಘಂಟಿಗೆ ಸೇರಿಕೊಂಡಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಭಾರತೀಯರು ಸ್ವಾತಂತ್ರ್ಯದ ನಂತರ ಆಂಗ್ಲಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಪರಿಗಣಿಸಿದ್ದಾರೆ. ಇತರ ಭಾಷೆಗಳ ಸೌಂದರ್ಯಗಳನ್ನು ಗಮನಿಸದೆ ಮೂಲ ಸಾಹಿತ್ಯವನ್ನು ಆಂಗ್ಲಭಾಷೆಗೆ ಅನುವಾದ ಮಾಡಿದಾಗ ವಾಕ್ಯಗಳು ನಿರ್ಜಿವವಾಗುತ್ತವೆ. ಸಾಹಿತ್ಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವುದು ಮಾತ್ರವಲ್ಲ ನಮ್ಮ ಭಾಷೆಯನ್ನು ಅಭಿವ್ಯಕ್ತಗೊಳಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಮೋತಿ ಬಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಖಿಲೇಷ್ ಸ್ವಾಗತಿಸಿ, ಕಾವೇರಿ ದೇವಯ್ಯ ವಂದಿಸಿದರು. ರಂಗನಾಥ್ ಕಾರ್ಯಕ್ರಮ ನಿರ್ವಹಿಸಿದರು.