ವಿದ್ಯಾರ್ಥಿಗಳಿಂದ ಡಾ. ಎಚ್. ಮಾಧವ ಭಟ್ ಗೆ ಬೀಳ್ಕೊಡುಗೆ – ಭಾವುಕನಾದ ಗುರು; ಕಣ್ಣೀರ್ಗರೆದ ವಿದ್ಯಾರ್ಥಿ ವೃಂದ
ಪುತ್ತೂರು: ಅದೊಂದು ಭಾವನಾತ್ಮಕ ಸನ್ನಿವೇಶ. ಒಂದೆಡೆ ಐ ಲವ್ ಯು ಸೋ ಮಚ್, ನಿಮ್ಮನ್ನು ಬಿಟ್ಟಿರಲಾರೆ ಎಂದು ಭಾವುಕನಾದ ಅನ್ನುವ ಗುರು, ಮತ್ತೊಂದೆಡೆ ಕಣ್ಣೀರ್‍ಗರೆದ ಸಹಸ್ರಾರು ವಿದ್ಯಾರ್ಥಿ ವೃಂದ. ಇಂತಹದ್ದೊಂದು ಮನಃಸ್ಪರ್ಶಿ ಕಾರ್ಯಕ್ರಮ ನಡೆದದ್ದು ವಿವೇಕಾನಂದ ಕಾಲೇಜಿನಲ್ಲಿ. ಸಾಕ್ಷಿಯಾದದ್ದು ಕೇಶವ ಸಂಕಲ್ಪ ಸಭಾಭವನ.
ಜೂನ್ ೩೦ರ ಮಂಗಳವಾರ ವೃತ್ತಿ ಬದುಕಿಗೆ ವಿದ್ಯಾ ಹೇಳುತ್ತಿರುವ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್‌ಗೆ ಕಾಲೇಜಿನ ಅಷ್ಟೂ ವಿದ್ಯಾರ್ಥಿಗಳು ಸೇರಿ ಸೋಮವಾರ ಅಭಿವಂದನೆ ನಡೆಸಿದರು. ತಮ್ಮ ಪ್ರೀತಿಯ ಗುರುವಿಗೆ ಭಾವಪೂರ್ಣ ವಿದಾಯ ಹೇಳಿ ವಂದಿಸಿದರು.
ನನ್ನ ಜೀವನದ ಮೊದಲ, ಎರಡನೆಯ, ಮೂರನೆಯ ಹೀಗೆ ಎಲ್ಲಾ ಆದ್ಯತೆ ನನ್ನ ಪ್ರೀತಿಯ ವಿದ್ಯಾರ್ಥಿಗಳೇ ಹೊರತು ಇನ್ನೇನೂ ಅಲ್ಲ. ನಿಮ್ಮನ್ನೆಲ್ಲಾ ನಾನು ತುಂಬಾ ಪ್ರೀತಿಸುತ್ತಿದ್ದೇನೆ. ನನಗೆ ನಿಮ್ಮೊಂದಿಗಿರಬೇಕೆಂಬ ಆಸೆಯಿದೆ. ನಾಳೆಯೂ ನಿಮ್ಮನ್ನು ಕಾಣುವುದಕ್ಕೆ ಬರುತ್ತೇನೆ. ಆದರೆ ನಾಡಿದ್ದಿನಿಂದ ಏನು ಮಾಡಲಿ ಎಂದು ಮಾಧವ ಭಟ್ ಬಿಕ್ಕಳಿಸುತ್ತಿದ್ದರೆ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಆಶ್ರುಧಾರೆ.
ಪ್ರಸ್ತುತ ವರ್ಷದಲ್ಲಿ ನೂತನ ವಿದ್ಯಾರ್ಥಿ ಸಂಘ ಇನ್ನೂ ಅಸ್ತಿತ್ವಕ್ಕೆ ಬರದಿದ್ದುದರಿಂದ ಕಳೆದ ವರ್ಷದ ವಿದ್ಯಾರ್ಥಿ ಸಂಘವೇ ಕಾರ್ಯಕ್ರಮವನ್ನು ನಿರ್ವಹಿಸಿತ್ತು. ಕಳೆದ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಧೀಶ್ ಉಡುಪ, ಕಾರ್ಯದರ್ಶಿ ನಿರೋಶ್ ಪಿ.ಜಿ ಹಾಗೂ ಜತೆ ಕಾರ್ಯದರ್ಶಿ ಸ್ವಾತಿ ಆಚಾರ್ಯ ತಮ್ಮ ನೆಚ್ಚಿನ ಪ್ರಾಧ್ಯಾಪಕರಿಗೆ ಗೌರವ ಸಮರ್ಪಣೆ ಮಾಡಿದರು.
ವಿದ್ಯಾರ್ಥಿ ನಾಯಕ ನಿಧೀಶ್ ಉಡುಪ ಮಾತನಾಡಿ ಮಾಧವ ಭಟ್ ಒಬ್ಬ ಅಮೋಘ ಪ್ರಾಧ್ಯಾಪಕ. ಅದ್ಭುತ ಪ್ರಾಂಶುಪಾಲ. ಅವರ ಬಳಿ ಎಷ್ಟು ಬಾರಿ ಹೋಗಿ ವಿವಿಧ ಬೇಡಿಕೆಗಳನ್ನಿಟ್ಟರೂ ಎಲ್ಲವನ್ನೂ ಸಮಾಧಾನದಿಂದ ಆಲಿಸಿ ಸಮಸ್ಯೆಗೆ ಪರಿಹಾರ ಸೂಚಿಸುವಂತಹವರು. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿ ವೃಂದವನ್ನು ನಡೆಸಿಕೊಂಡ ರೀತಿ ವಿಶೇಷವಾದದ್ದು. ಅಂತಹ ಪ್ರಾಧ್ಯಾಪಕ ಮತ್ತೊಬ್ಬ ಸಿಗುವುದು ಕಷ್ಟಸಾಧ್ಯ ಎಂದರು.
ಜತೆಕಾರ್ಯದರ್ಶಿ ಸ್ವಾತಿ ಆಚಾರ್ಯ ಮಾತನಾಡಿ ಮಾಧವ ಭಟ್ ಅವರ ಮಾತನ್ನು ಕೇಳಿಸಿಕೊಳ್ಳುವುದೇ ನಮಗೆಲ್ಲಾ ಒಂದು ಸಂಭ್ರಮ. ಅವರ ನಗು ಕಾಣುವುದೇ ಸಂತಸದ ವಿಚಾರವಾಗಿತ್ತು ಎಂದರೆ ವಿದ್ಯಾರ್ಥಿನಿ ಪೂಜಾಶ್ರೀ ಮಾಧವ ಭಟ್ಟರ ಪಾಠ ಕೇಳುವಂತಾದದ್ದು ನಮ್ಮ ಸೌಭಾಗ್ಯ. ಅವರು ಮಾಡಿದ ಪಾಠ ಮರೆಯಲು ಸಾಧ್ಯವಿಲ್ಲ. ಅವರ ಬೋಧನೆ ಕೇಳಿದ ನಂತರ ಇಂಗ್ಲಿಷ್ ಭಾಷೆ ಆಪ್ತವಾಯಿತು ಎಂದು ನುಡಿದರು.
ಕಾಲೇಜಿನ ಸಮಸ್ತ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಮಾತ್ರವಲ್ಲದೆ ಹಿರಿಯ ವಿದ್ಯಾರ್ಥಿಗಳೂ ಕಾರ್ಯಕ್ರಮದಲ್ಲಿ ಭಾಗಿಯಾದರು. ಅನೇಕ ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅನಿಸಿಕೆ ಹಂಚಿಕೊಂಡರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಶ್ರೀವತ್ಸ ಕಾರ್ಯಕ್ರಮ ನಿರ್ವಹಿಸಿದರು.