ವಿವೇಕಾನಂದದಲ್ಲಿ ಪ್ರೊ.ಆನಂದ್ ಹಾಗೂ ಎ ಜಗನ್ನಾಥ್ಗೆ ಬೀಳ್ಕೊಡುಗೆ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಮುನ್ನಡೆಯುತ್ತಿರುವ ವಿದ್ಯಾಸಂಸ್ಥೆಗಳು ಉತ್ತಮ ಶಿಕ್ಷಣವನ್ನು ಸಮಾಜಕ್ಕೆ ನೀಡುತ್ತಿವೆ. ಈ ಕಾರಣಕ್ಕಾಗಿಯೇ ಅನೇಕ ಸಂಸ್ಥೆಗಳ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಯನ್ನು ವಿದ್ಯಾವರ್ಧಕ ಸಂಘಕ್ಕೆ ಬಿಟ್ಟುಕೊಡಲು ಬಯಸಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ಕಾಯ್ದುಕೊಂಡು ಮುನ್ನಡೆಯುವ ಜವಾಬ್ಧಾರಿ ಸಂಸ್ಥೆಗಳ ಮೇಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಆಗಸ್ಟ್ ೩೧ಕ್ಕೆ ಸೇವಾನಿವೃತ್ತಿ ಹೊಂದಿದ ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ.ಆನಂದ್ ಹಾಗೂ ಕಛೇರಿ ಅಧೀಕ್ಷಕ ಎ ಜಗನ್ನಾಥ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಆನಂದ್ ನಮ್ಮಲ್ಲಿ ಅತ್ಯುತ್ಕೃಷ್ಟ ವಿದ್ಯಾರ್ಥಿಗಳಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕೌನ್ಸೆಲಿಂಗ್ ನಡೆಯಬೇಕು. ತನ್ಮೂಲಕ ಅವರ ಭಾವನೆಗಳಿಗೆ ಸ್ಪಂದಿಸುವ ಹಾಗೂ ಮಾನಸಿಕ ಧೈರ್ಯ ತುಂಬುವ ಕಾರ್ಯ ಮತ್ತಷ್ಟು ವ್ಯಾಪಕವಾಗಿ ನಡೆಯಬೇಕಿದೆ ಎಂದರಲ್ಲದೆ ಉಪನ್ಯಾಸಕರು ಬೇರೆ ಬೇರೆ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ನುಡಿದರು.
ನಿವೃತ್ತಿ ಹೊಂದುತ್ತಿರುವ ಕಛೇರಿ ಅಧೀಕ್ಷಕ ಎ ಜಗನ್ನಾಥ ಮಾತನಾಡಿ ಕಛೇರಿ ಹಾಗೂ ಪ್ರಾಂಶುಪಾಲರ ನಡುವಣ ಸಂಬಂಧ ಅತ್ಯಂತ ಗಹನವಾದದ್ದು. ಅನೇಕ ಸಂದರ್ಭಗಳಲ್ಲಿ ನಂಬಿಕೆಯ ಆಧಾರದ ಮೇಲೆ ಅನೇಕ ಕಾರ್ಯಗಳು ನಡೆಯುತ್ತವೆ. ಹಾಗಾಗಿ ಪರಸ್ಪರ ವಿಶ್ವಾಸ ಇದ್ದರೆ ಮಾತ್ರ ಸಸೂತ್ರವಾಗಿ ಎಲ್ಲವೂ ಸಾಗುವುದಕ್ಕೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ಅತ್ಯುತ್ತಮ ಶಿಕ್ಷಣವೇ ವಿವೇಕಾನಂದ ಕಾಲೇಜಿನ ಆದ್ಯತೆ. ಈ ಹಿನ್ನಲೆಯಲ್ಲಿಯೇ ಇಲ್ಲಿನ ಪ್ರತಿಯೊಬ್ಬರೂ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಅನೇಕ ಅವಶ್ಯಕತೆಗಳೂ ಇರುತ್ತವೆ. ಪ್ರಾಮುಖ್ಯತೆಗೆ ಅನುಗುಣವಾಗಿ ಅದನ್ನು ಈಡೇರಿಸುತ್ತಾ ಮುಂದುವರಿಯಬೇಕಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಶುಭಹಾರೈಸಿದರು. ಕಾಲೇಜಿನ ಸಂಚಾಲಕ ಎಂ.ಟಿ.ಜಯರಾಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್, ಎಂ.ಕಾಂ ವಿಭಾಗ ಮುಖ್ಯಸ್ಥೆ ವಿಜಯ ಸರಸ್ವತಿ, ನೂತನ ಕಛೇರಿ ಅಧೀಕ್ಷಕ ಮುರಳೀಧರ, ಕಛೇರಿ ಸಿಬ್ಬಂದಿ ಮೋಹನ ನಿವೃತ್ತರ ಬಗೆಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಭೌತಶಾಸ್ತ್ರ ಉಪನ್ಯಾಸಕಿ ತನ್ಮಯಲಕ್ಷ್ಮಿ ಡಿ ಪ್ರಾರ್ಥಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಭಟ್ ಸ್ವಾಗತಿಸಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಹರಿಣಿ ಪುತ್ತೂರಾಯ ವಂದಿಸಿದರು.