ವಿವೇಕಾನಂದ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಶುಕ್ರವಾರ ಕಾಲೇಜಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಸಂತ ಭಟ್ ವಿದ್ಯಾರ್ಥಿಗಳ ವಿದ್ಯಾರ್ಜನೆ ಪ್ರಕ್ರಿಯೆಯಲ್ಲಿ ಮೊಬೈಲ್ ದೂರವಾಣಿಗಳು ತೊಡಕುಗಳಾಗಿ ಪರಿಣಮಿಸುತ್ತಿವೆ. ಇದನ್ನು ವಿದ್ಯಾರ್ಥಿಗಳೆಲ್ಲರೂ ಮನಗಾಣಬೇಕು. ತಮ್ಮ ಓದಿಗೆ ತಡೆಯಾಗಬಲ್ಲ ವಸ್ತು-ವಿಷಯಗಳಿಂದ ದೂರವಿದ್ದು, ಸಾಧನೆಯ ಪಥದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲೇ ವಿವೇಕಾನಂದ ಕಾಲೇಜು ಅತ್ಯುತ್ತಮ ಸ್ಥಾನವನ್ನು ಹೊಂದಿದೆ. ಇಲ್ಲಿ ವಿದ್ಯಾರ್ಜನೆಗೆ ಅವಕಾಶ ದೊರಕುವುದು ಹೆವ್ಮ್ಮೆಯ ಸಂಗತಿ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವೆನಿಸುವ ಸಮಸ್ತ ಸಂಗತಿಗಳೂ ಇಲ್ಲಿವೆ. ವಿದ್ಯಾರ್ಥಿಗಳಿಗೆ ನೆರವಾಗುವ ಎಲ್ಲಾ ಸೌಕರ್ಯಗಳನ್ನೂ ಈ ಕಾಲೇಜು ಹೊಂದಿದೆ. ಸಮಯದ ಹಂಗನ್ನು ಮೀರಿ ಕರ್ತವ್ಯ ನಿರ್ವಹಿಸುವ ಉಪನ್ಯಾಸಕ ವೃಂದ ಇಲ್ಲಿರುವುದೇ ಈ ಕಾಲೇಜಿಗೆ ಇಷ್ಟೊಂದು ಮನ್ನಣೆ ದೊರಕುವುದಕ್ಕೆ ಕಾರಣವೆನಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಮಾತನಾಡಿ ಸಕಲರ ಸಹಕಾರದಿಂದ ವಿವೇಕಾನಂದ ವಿದ್ಯಾಸಂಸ್ಥೆ ಬೆಳೆದಿದೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಉಪನ್ಯಾಸಕರೊಂದಿಗೆ ಹೆತ್ತವರೂ ಕೈಜೋಡಿಸಬೇಕು. ವಿದ್ಯಾರ್ಥಿಗಳ ಮನಸ್ಸನ್ನರಿತು ಸಹಕಾರಿಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಗುಣನಡತೆಯನ್ನೂ ಉತ್ಕೃಷ್ಟತೆಯೆಡೆಗೆ ಒಯ್ಯುವ ಯತ್ನವನ್ನು ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಮಾಡಲಾಗುತ್ತಿದೆ. ಕಾಲೇಜು ಪ್ರಸ್ತುತ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು, ಈ ವರೆಗೆ ಮೂವತ್ತಮೂರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿವೇಕಾನಂದ ಕಾಲೇಜಿನಿಂದ ಸಮಾಜಕ್ಕೆ ಅಡಿಯಿಟ್ಟಿದ್ದಾರೆ ಎಂದು ತಿಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ವೆಂಕಟೇಶ್ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಿವೇಕಾನಂದ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಹರಿಣಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಪ್ರಸ್ತಾವನೆಗೈದರು. ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಶಂಕರನಾರಾಯಣ ಭಟ್ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್ ಹಾಗೂ ಉಪನ್ಯಾಸಕ ಶ್ರೀಕೃಷ್ಣ ಗಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಕಾಲೇಜಿನ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಪ್ರಸ್ತುತಪಡಿಸಿದರು.