ವಿದ್ಯೆಯಲ್ಲಿ ದೈವತ್ವ ಕಾಣಲು ಸಾಧ್ಯವಾಗಬೇಕು : ರಾಮ ಭಟ್
ಪುತ್ತೂರು : ವಿದ್ಯೆಯಲ್ಲಿ ದೈವತ್ವವನ್ನು ಕಾಣಲು ಸಾಧ್ಯವಾದಾಗ ಮಾತ್ರ ವ್ಯಕ್ತಿ ಯೋಗ್ಯನಾಗಿ ಬೆಳೆದುಬರಲು ಸಾಧ್ಯ. ಕೇವಲ ರ್‍ಯಾಂಕ್ ಹಾಗೂ ಶೇಕಡಾವಾರು ಅಂಕಗಳನ್ನಷ್ಟೇ ಲಕ್ಷ್ಯವಾಗಿರಿಸಿಕೊಂಡು ಶಿಕ್ಷಣವನ್ನು ಜಾರಿಗೊಳಿಸಿದರೆ ಶಿಕ್ಷಣದ ಪಾವಿತ್ರ್ಯತೆ ಶಿಥಿಲಗೊಳ್ಳುತ್ತದೆ ಮಾತ್ರವಲ್ಲದೆ ಶಿಕ್ಷಣ ವ್ಯಾಪಾರವೆನಿಸುತ್ತದೆ. ಆದುದರಿಂದ ಜವಾಬ್ಧಾರಿಯುತ ವ್ಯಕ್ತಿತ್ವವನ್ನು ರೂಪುಗೊಳಿಸುವ ಮಹತ್ತರ ಕಾರ್ಯ ಶಿಕ್ಷಣದಿಂದ ಸಾಧ್ಯವಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಗೌರವಾಧ್ಯಕ್ಷ ಕೆ.ರಾಮ ಭಟ್ ಹೇಳಿದರು.
ಅವರು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿವೇಕಾನಂದ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ವಿದ್ಯಾವಂತರಿಂದಲೇ ಕೂಡಿರುವ ಸಮಾಜದ ಮೌಲ್ಯ ಇಂದು ಕುಸಿಯುತ್ತಿರುವುದನ್ನು ಕಾಣುವಾಗ ಆತಂಕವಾಗುತ್ತದೆ. ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ನಕಾರಾತ್ಮಕ ಘಟನೆಗಳನ್ನು ಕಾಣುವಾಗ ವಿದ್ಯಾರ್ಥಿಗಳಿಗೆ ದೊರಕುತ್ತಿರುವ ವಿದ್ಯೆಯ ತಳಪಾಯವೇ ಸರಿಯಿಲ್ಲ ಅನಿಸುತ್ತದೆ. ಆದ್ದರಿಂದ ಅತ್ಯುತ್ತಮ ಶಿಕ್ಷಣ ನೀಡುವ ಮುಖೇನ ಮನೆ, ಪರಿಸರ, ಶಿಕ್ಷಣ ಸಂಸ್ಥೆ ಹಾಗೂ ದೇಶಕ್ಕೆ ಘನತೆ ತರಬಹುದಾದ ಮಕ್ಕಳನ್ನು ರೂಪಿಸುವ ಹೊಣೆ ಶಿಕ್ಷಕರ ಹಾಗೂ ಹೆತ್ತವರ ಮೇಲಿದೆ ಎಂದು ನುಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಮಾತನಾಡಿ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಅನೇಕ ಅವಕಾಶಗಳಿವೆ. ಇದನ್ನು ವಿದ್ಯಾರ್ಥಿಗಳು ಗಮನಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಒಟ್ಟಾಗಿ ಕಲೆತು ಕಲಿಯುವ ವ್ಯವಸ್ಥೆ ಇಲ್ಲಿ ಜಾರಿಯಲ್ಲಿದೆ. ಇಲ್ಲಿ ಯಾವ ವಿದ್ಯಾರ್ಥಿಯೂ ಯಾವ ಸಂದರ್ಭದಲ್ಲೂ ಆತಂಕಕ್ಕೊಳಗಾಗುವ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ವಿದ್ಯಾರ್ಥಿಗಳ ಮೇಲೆ ಹೆತ್ತವರಿಗೆ, ಶಿಕ್ಷಕರಿಗೆ ಮಾತ್ರವಲ್ಲದೆ ಆಡಳಿತ ಮಂಡಳಿಗೂ ಅಪಾರ ಭರವಸೆ, ಕನಸುಗಳಿವೆ. ಇದನ್ನು ಅರಿತುಕೊಂಡು ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು. ಕಾಲೇಜಿನಲ್ಲಿ ಪಠ್ಯಕ್ಕೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ವಿಫುಲ ಅವಕಾಶಗಳಿವೆ. ಇವೆಲ್ಲವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಯಶಸ್ವೀ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದರಲ್ಲದೆ ಹೆತ್ತವರು ಆಗಾಗ್ಗೆ ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಬಗೆಗೆ ವಿಚಾರಿಸಿಕೊಳ್ಳುವುದು ಅಗತ್ಯ ಎಂದರು.
ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ ಮಕ್ಕಳು ಬೆಳೆದಂತೆ ಹೆತ್ತವರೊಂದಿಗಿನ ಸಂವಹನ ಕಡಿಮೆಯಾಗುತ್ತಿದೆ. ಆದರೆ ಹೆತ್ತವರು ಇದಕ್ಕೆ ಅವಕಾಶ ನೀಡದೆ ಪ್ರತಿ ದಿನವೂ ತಮ್ಮ ಮಕ್ಕಳೊಂದಿಗೆ ಸಾಕಷ್ಟು ಹೊತ್ತು ಮಾತನಾಡಿ, ಅವರಿಗೊಂದು ಆಪ್ತ ಅನುಭವವನ್ನು ನೀಡಬೇಕು. ತಂದೆ ತಾಯಿಯರೊಂದಿಗೆ ಆತ್ಮೀಯ ಸಂಬಂಧ ಇಲ್ಲದಿದ್ದರೆ ಮಕ್ಕಳು ಹಾದಿ ತಪ್ಪುವ ಅವಕಾಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಮಾತನಾಡಿ, ಮಕ್ಕಳು ಮೊಬೈಲ್, ಇಂಟರ್‌ನೆಟ್ ಬಗೆಗೆ ವಿಪರೀತ ವ್ಯಾಮೋಹ ಬೆಳೆಸಿಕೊಳ್ಳದಂತೆ ಹೆತ್ತವರು ಗಮನಿಸಬೇಕು. ಅಂತರ್ಜಾಲ ಕಲಿಕಾ ಸಾಮರ್ಥ್ಯವನ್ನು ಕ್ಷೀಣಗೊಳಿಸುತ್ತದೆ ಎಂಬುದನ್ನು ಗಮನಿಸಬೇಕು. ಮಾತ್ರವಲ್ಲದೆ ನಮ್ಮ ಮಕ್ಕಳ ಸ್ನೇಹಿತ ವರ್ಗದ ಬಗೆಗೂ ಲಕ್ಷ್ಯ ಇರಿಸಬೇಕಾದ್ದು ಅಗತ್ಯ ಎಂದರಲ್ಲದೆ ಅಕಸ್ಮಾತ್ ಮಕ್ಕಳಿಗೆ ದ್ವಿಚಕ್ರ ವಾಹನ ಕೊಡಿಸುವುದಿದ್ದಲ್ಲಿ ದಯವಿಟ್ಟು ಲೈಸನ್ಸ್ ಮತ್ತು ಹೆಲ್ಮೆಟ್ ಅನ್ನೂ ಕೊಡಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಸಯರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ಥಾವನೆಗೈದರು. ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ರಮೇಶ್ ಕೆ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ. ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗ ಉಪನ್ಯಾಸಕಿ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರು ಕಾಲೇಜಿನ ಇತಿಹಾಸ, ಪರಿಸರ, ಕಲಿಕೆ, ಶಿಸ್ತು, ವಿದ್ಯಾರ್ಥಿ ವೇತನವೇ ಮೊದಲಾದ ಅನೇಕ ಸಂಗತಿಗಳ ಬಗೆಗೆ ಸಮಗ್ರ ಮಾಹಿತಿ ನೀಡಿದರು.