ವಿವೇಕಾನಂದದಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ – ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೆತ್ತವರ ಜವಾಬ್ಧಾರಿ: ವರಲಕ್ಷ್ಮೀ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜು ಹಾಗೂ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಕಾಲೇಜಿಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೆತ್ತವರ ಕರ್ತವ್ಯ ಎಂದರು.
ಹೆತ್ತವರು ಮನೆಯಲ್ಲಿ ಟಿವಿ ನೋಡುತ್ತಾ ಮಕ್ಕಳನ್ನು ನೋಡಬೇಡಿ ಎನ್ನುವುದು ಪರಿಣಾಮ ಮಾಡುವುದಿಲ್ಲ. ಬದಲಾಗಿ ಮಕ್ಕಳಿಗಾಗಿ ಹೆತ್ತವರೂ ಟಿ.ವಿ . ನೋಡುವುದನ್ನು ಕಡಿಮೆಗೊಳಿಸಬೇಕು. ನಾವು ನೈತಿಕವಾಗಿ ಗಟ್ಟಿಯಾಗಿದ್ದಲ್ಲಿ ಮಾತ್ರ ಮಕ್ಕಳಿಗೆ ಹೇಳುವಾಗ ಆ ಮಾತಿಗೆ ಗೌರವ ಪ್ರಾಪ್ತವಾಗುತ್ತದೆ. ಮಕ್ಕಳು ಕಣ್ಣ ಮುಂದೆಯೇ ಬೆಳೆಯುವಂತಹ ವಾತಾವರಣ ಮನೆಯಲ್ಲಿ ಇರಬೇಕು. ಹಿರಿಯರ, ಅನುಭವಿಗಳ ಒಡನಾಟ ನಮ್ಮ ಮಕ್ಕಳಿಗೆ ದೊರಕುವಂತಹ ವ್ಯವಸ್ಥೆಯನ್ನು ಹೆತ್ತವರು ಕಲ್ಪಿಸಿಕೊಡಬೇಕು ಎಂದು ನುಡಿದರು.
ಮಕ್ಕಳಿU ಹೆತ್ತವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ತಿಳಿಯಪಡಿಸುವುದು ಬಹಳ ಮುಖ್ಯ. ಅನೇಕ ಸಂದರ್ಭಗಳಲ್ಲಿ ನಮ್ಮ ಕಷ್ಟ ಮಕ್ಕಳಿಗೆ ತಿಳಿಯುವುದು ಬೇಡ ಎಂಬ ಭಾವನೆಯಿಂದ ಹೆತ್ತವರು ತಮ್ಮ ಆರ್ಥಿಕ ಸಂಕಷ್ಟಗಳನ್ನು ಮಕ್ಕಳ ಮುಂದೆ ಹೇಳುವುದಿಲ್ಲ. ಆದರೆ ನಮ್ಮ ಸಾಲ ಮೂಲಗಳನ್ನು ಮಕ್ಕಳಿಗೆ ಹೇಳಿದಾಗ ಮಾತ್ರ ಅವರಿಗೂ ಕಷ್ಟದ ಅರಿವು ಮೂಡಿ ಜಾಗೃತರಾಗುತ್ತಾರೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನಲ್ಲಿ ಅತ್ಯುತ್ತಮ ಪಠ್ಯ ಹಾಗೂ ಪಠ್ಯೇತರ ವ್ಯವಸ್ಥೆಗಳಿವೆ. ಇದನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಆಧುನಿಕ ಆಕರ್ಷಣೆಗಳಾದ ಟಿ.ವಿ., ಮೊಬೈಲ್ ಗಳಿಂದ ದೂರ ಇದ್ದು ಸಾಧನೆಯೆಡೆಗಿನ ಪಯಣವನ್ನು ಮುಂದುವರಿಸಬೇಕು. ದೇಶಭಕ್ತ, ಸಂಸ್ಕಾರವಂತ ನಾಗರಿಕರಾಗಿ ಮಕ್ಕಳು ಬೆಳೆಯಬೇಕು ಎಂದು ಕರೆನೀಡಿದರು.
ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ ಪ್ರತಿ ದಿನವೂ ಹೆತ್ತವರು ಮಕ್ಕಳನ್ನು ಮಾತಾಡಿಸಬೇಕು ಹಾಗೂ ಕಾಲೇಜಿನ ಕಾರ್ಯಚಟುವಟಿಕೆಗಳ ಬಗೆಗೆ ವಿಚಾರಿಸಬೇಕು. ಆಗ ಮಕ್ಕಳಿಗೂ ಜವಾಬ್ಧಾರಿ ಬರುವುದಕ್ಕೆ ಸಾಧ್ಯ. ಸನ್ನಡತೆ ಸಂಸ್ಕಾರಗಳನ್ನು ಹೆತ್ತವರು ಒಡಮೂಡಿಸಬೇಕು. ಕಾಲೇಜೂ ಆ ದಿಸೆಯಲ್ಲಿ ಪ್ರಯತ್ನಿಸುತ್ತದೆ ಎಂದರು. ರಕ್ಷಕ ಶಿಕ್ಷಕ ಸಂಘದ ಸದಸ್ಯ ಗೋಪಾಲಕೃಷ್ಣ ಕೆ ತಮ್ಮ ಅಭಿಪ್ರಾಯ ಮಂಡಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ಸದಸ್ಯ ಮೋಹನ್, ರಕ್ಷಕ ಶಿಕ್ಷಕ ಸಂಘದ ಸಹ ಕಾರ್ಯದರ್ಶಿ ಪೂವಪ್ಪ ಹಾಗೂ ಮತ್ತಿತರ ಸದಸ್ಯರುಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಅನೂಷಾ, ಶ್ರೀಲಕ್ಷ್ಮಿ ಹಾಗೂ ಆಶಾ ಪ್ರಾರ್ಥಿಸಿದರು. ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವನೆಗೈದರು. ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರ ನಾರಾಯಣ ಭಟ್ ವಂದಿಸಿದರು. ಪ್ರಾಧ್ಯಾಪಕರಾದ ಡಾ.ಶ್ರೀಧರ ಎಚ್.ಜಿ, ಪ್ರೊ.ಶ್ರೀಕೃಷ್ಣ ಗಣರಾಜ ಭಟ್, ಹರಿಣಿ ಪುತ್ತೂರಾಯ, ರವಿಕಲಾ ಹಾಗೂ ಮಲ್ಲಿಕಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ನಾಗರಿಕ ಸೇವಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ರೂಪಿಸುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಯಶಸ್ ಸಂಸ್ಥೆಯ ಬಗೆಗೆ ಅದರ ಅಧ್ಯಕ್ಷ ಮುರಳಿಕೃಷ್ಣ ಮಾಹಿತಿ ನೀಡಿದರು. ಅಂತೆಯೇ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಕಾಲೇಜಿನ ಸಮಗ್ರ ಮಾಹಿತಿಯನ್ನು ಹೆತ್ತವರು ಹಾಗೂ ವಿದ್ಯಾರ್ಥಿಗಳಿಗೆ ನೀಡಿದರು.