ವಿವೇಕಾನಂದದಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ – ತಾನೇನಾಗಬೇಕೆಂಬ ಯೋಚನೆ ವಿದ್ಯಾರ್ಥಿಗಳಿಗೆ ಅಗತ್ಯ : ಪಿ.ಶ್ರೀನಿವಾಸ ಪೈ
ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಏನಾಗಬೇಕೆಂದು ಯೋಚಿಸಬೇಕು. ಅಂತೆಯೇ ಹೆತ್ತವರೂ ತಮ್ಮ ಮಕ್ಕಳು ಹೇಗೆ ಬೆಳೆಯಬೇಕು ಎಂಬುದರ ಬಗೆಗೆ ಆಲೋಚನೆ ಮಾಡಬೇಕು. ಹಾಗಾದಾಗ ಉತ್ತಮ ಮಾರ್ಗವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.
ಅವರು ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶನಿವಾರ ಮಾತನಾಡಿದರು.
ಮಕ್ಕಳು ಹೆತ್ತವರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಕೆಡುತ್ತಿರುವ ಸಮಾಜದಲ್ಲಿ ತಾವೂ ಅದೇ ಹಾದಿಯಲ್ಲಿ ನಡೆದು ಪೋಷಕರ ಕನಸನ್ನು ಭಗ್ನಗೊಳಿಸಬಾರದು. ಪಠ್ಯದೊಂದಿಗೆ ಪಠ್ಯೇತರ ಸಂಗತಿಗಳನ್ನೂ ತಿಳಿದುಕೊಳ್ಳುತ್ತಾ ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ಕೃಷ್ಟ ದೇಶಪ್ರೇಮಿಯಾಗಬೇಕು ಎಂದರಲ್ಲದೆ ಮೊಬೈಲ್, ವಾಹನಗಳ ಆಕರ್ಷಣೆಯಿಂದ ಬದುಕುನ್ನು ಹಾಳು ಮಾಡಿಕೊಳ್ಳಬಾರದು ಎಂದು ಕರೆನೀಡಿದರು.
ಮತ್ತೋರ್ವ ಅತಿಥಿ ರಕ್ಷಕ ಶಿಕ್ಷಕ ಸಂಘದ ಸದಸ್ಯ ಸೂರ್ಯನಾರಾಯಣ ರಾವ್ ಮಾತನಾಡಿ ಹೆತ್ತವರು ತಮ್ಮ ತಮ್ಮ ಉದ್ಯೋಗಗಳ ಭರಾಟೆಯಲ್ಲಿ ಮಕ್ಕಳ ಬಗೆಗೆ ಗಮನ ನೀಡುವುದು ಕಡಿಮೆಯಾಗುತ್ತಿದೆ. ಪಕ್ಕದ ಮನೆಯವರೊಂದಿಗೆ ಸಾಕಷ್ಟು ಹರಟುವ ನಮ್ಮ ಮಕ್ಕಳು ನಮ್ಮೊಂದಿಗೆ ಮನಃಪೂರ್ತಿಯಾಗಿ ಮಾತನಾಡುವುದಿಲ್ಲ ಎಂದರೆ ಅರ್ಥವೇನು? ಮಕ್ಕಳೊಂದಿಗೆ ನಿತ್ಯ ಮಾತನಾಡುವ ಪರಿಪಾಠವನ್ನು ಹೆತ್ತವರು ಬೆಳೆಸಿಕೊಂಡಾಗ ಮಾತ್ರ ಮಕ್ಕಳೂ ನಮ್ಮ ಜತೆ ಮಾತನಾಡುವುದಕ್ಕೆ ಬಯಸುತ್ತಾರೆ ಎಂದರು.
ಹೆತ್ತವರು ಮಕ್ಕಳಿಗೆ ಆದರ್ಶವೇ ಹೊರತು ಕ್ರಿಕೆಟ್, ಸಿನೆಮಾ ತಾರೆಯರಲ್ಲ. ಅಂತಹ ತಾರೆಗಳನ್ನು ನೋಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನು ಯುವಮನಸ್ಸುಗಳು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೆ ಮಕ್ಕಳಿಗೆ ಎಲ್ಲವನ್ನೂ ಮಾಡಿಕೊಡುವ ರೂಢಿ ಬೇಡ. ಅವರವರೇ ಬಟ್ಟೆ ಒಗೆದುಕೊಳ್ಳುವ, ಆಹಾರ ಕಟ್ಟಿಕೊಳ್ಳುವ ಕ್ರಮವನ್ನು ಕಲಿಸಿಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಒಟ್ಟಿಗೆ ಊಟ ಮಾಡುವ, ಟಿ.ವಿ.ಯನ್ನು ನೋಡದೆ ಹರಟುವ ವಾತಾವರಣ ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ ಕೆಟ್ಟ ಆಮಿಷಗಳು ಸದಾ ನಮ್ಮನ್ನು ಆಕರ್ಷಿಸುತ್ತವೆ. ಆದರೆ ಅದರಿಂದ ದೂರವಾಗಿ ಓದಿನ ಬಗೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಹೆತ್ತವರೂ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕಾಲೇಜಿಗೆ ಸೇರಿಸಿದಲ್ಲಿಗೆ ಜವಾಬ್ಧಾರಿ ಮುಗಿಯುವುದಿಲ್ಲ. ಪ್ರತಿ ದಿನವೂ ಕನಿಷ್ಟ ಹತ್ತು ನಿಮಿಷವನ್ನಾದರೂ ಮಕ್ಕಳಿಗೆ ಮೀಸಲಿಡಬೇಕು ಎಂದು ನುಡಿದರು.
ಗಣಿತ ಎಂ.ಎಸ್ಸಿ ಆರಂಭ :
ಪ್ರಸ್ತಾವನೆಗೈದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕಾಳೇಜಿನಲ್ಲಿ ಪ್ರಸ್ತುತ ವರ್ಷದಿಂದ ಗಣಿತ ಶಾಸ್ತ್ರ ಎಂ.ಎಸ್ಸಿ ಆರಂಭಿಸಲಾಗುತ್ತಿದೆ. ಅದಾಗಲೇ ಎಂ.ಕಾಂ, ರಸಾಯನಶಾಸ್ತ್ರ ಎಂಎಸ್ಸಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಎಂ.ಎ ತರಗತಿಗಳು ನಡೆಯುತ್ತಿವೆ. ವರ್ಷದಿಂದ ವರ್ಷಕ್ಕೆ ಕಾಲೇಜು ವಿಸ್ತೃತಗೊಳ್ಳುತ್ತಿದೆ. ವಿದ್ಯಾರ್ಥಿಗಳನ್ನು ಪರಿಪೂರ್ಣತೆಯೆಡೆಗೆ ಕರೆದೊಯ್ಯುವ ಎಲ್ಲಾ ಪ್ರಯತ್ನಗಳೂ ಜಾರಿಯಲ್ಲಿವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ವರಲಕ್ಷ್ಮೀ ವೈ ಮಾತನಾಡಿ ವಿದ್ಯಾರ್ಥಿಗಳಿಗೆ ಓದುವುದೇ ಜವಾಬ್ಧಾರಿ. ಯೋಗ, ಪ್ರಾಣಾಯಾಮಗಳಿಂದ ಓದುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಮೊಬೈಲ್, ದೂರದರ್ಶನಗಳಿಂದ ಸಾಕಷ್ಟು ದೂರವಿರುವುದು ಉತ್ತಮ ಫಲಿತಾಂಶವನ್ನು ತಂದುಕೊಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಪ್ರಸ್ತುತ ವರ್ಷ ವಿವೇಕಾನಂದ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿನಿಯರಾದ ಅನುಷಾ, ಅಂಕಿತಾ ಹಾಗೂ ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ವಂದಿಸಿದರು. ಉಪನ್ಯಾಸಕಿಯರಾದ ವಿಜಯಲಕ್ಷ್ಮಿ, ಡಾ.ಗೀತಾ ಕುಮಾರಿ ಹಾಗೂ ಪ್ರಾಧ್ಯಾಪಕ ಶ್ರೀಕೃಷ್ಣ ಗಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರಿಂದ ಕಾಲೇಜಿನ ಬಗೆಗೆ ಸಮಗ್ರ ಮಾಹಿತಿ ವಿನಿಮಯ ಕಾರ್ಯಕ್ರಮ ನಡೆಯಿತು.