ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ – ದೇಶದಲ್ಲಿ ಶುದ್ಧತೆಯ ಪ್ರವಾಹ ಹರಿಯಬೇಕು: ಕೆ.ರಾಮ ಭಟ್
ಪುತ್ತೂರು: ಪ್ರಸ್ತುತ ದೇಶದೆಲ್ಲೆಡೆ ಭ್ರಷ್ಟತೆ ಹಬ್ಬಿ ವಾತಾವರಣ ಕಲುಷಿತಗೊಂಡಿದೆ. ಹೀಗಿರುವಾಗ ಪ್ರಾಮಾಣಿಕ, ದಕ್ಷ ಹಾಗೂ ದೇಶ – ಸಮಾಜದ ಬಗೆಗಿನ ಕಲ್ಪನೆಯುಳ್ಳ ವ್ಯಕ್ತಿಗಳ ನಿರ್ಮಾಣ ಅತ್ಯಂತ ಅಗತ್ಯ. ತನ್ಮೂಲಕ ಶುದ್ಧತೆಯ ಪ್ರವಾಹ ಹರಿಯಬೇಕಿದೆ. ಈ ಹಿನ್ನಲೆಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಹಲವು ವರ್ಷಗಳಿಂದ ಕಂಕಣಬದ್ಧವಾಗಿವೆ. ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಗೌರವಾಧ್ಯಕ್ಷ ಕೆ.ರಾಮ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಲಾದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.
ಪ್ರತಿಯೊಬ್ಬರೂ ರ್‍ಯಾಂಕ್ ವಿಜೇತರಾದವರ ಬಗೆಗೇ ಮಾತನಾಡುತ್ತಾರೆ. ಆದರೆ ಪ್ರತಿಯೊಬ್ಬನಲ್ಲೂ ಅದಮ್ಯವಾದ ಚೈತನ್ಯವಿರುವುದನ್ನು ಗುರುತಿಸಬೇಕು. ವಿಪರ್‍ಯಾಸವೆಂದರೆ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳು ನಂತರದ ದಿನಗಳಲ್ಲಿ ಅದೇ ತೆರನಾದ ಸಾಧನೆಯಲ್ಲಿ ಮುಂದುವರಿಯುತ್ತಿರುವುದು ಕಾಣಿಸುತ್ತಿಲ್ಲ. ಹಾಗಾಗಿ ವ್ಯಕ್ತಿಯೋರ್ವನ ನಿತ್ಯ ಜೀವನ ಉನ್ನತಿಕೆಯನ್ನು ಕಾಣುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ವಿ ಮಾತನಾಡಿ ಪ್ರತಿಯೊಂದು ಕೆಲಸದಲ್ಲೂ ಪರಿಪೂರ್ಣತೆ ಮುಖ್ಯ. ಆಗ ಬದುಕಿಗೊಂದು ಅರ್ಥ ದೊರಕುತ್ತದೆ ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ರಕ್ಷಕ ಶಿಕ್ಷಕ ಸಂಘದ ಈಶ್ವರ ಭಟ್ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿದ್ಯಾರ್ಥಿನಿಯರಾದ ಸುಕನ್ಯಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಉಪ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಪ್ರಸ್ತಾವನೆಗೈದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ವಂದಿಸಿದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಹರಿಣಿ ಪುತ್ತೂರಾಯ ಹಾಗೂ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ತರುವಾಯ ಪ್ರಾಂಶುಪಾಲರಿಂದ ಮಾಹಿತಿ ಕಾರ್ಯಾಗಾರ ನಡೆಯಿತು.