ಗಣಪತಿಯ ಮಾತೃಪ್ರೇಮ ಎಲ್ಲರಿರೂ ಮಾದರಿ : ವಿಶ್ವೇಶ್ವರ ಭಟ್
ಪುತ್ತೂರು: ವಿಶ್ವದಲ್ಲಿ ದೊಡ್ಡವರೆನ್ನಿಸಿದವರೂ ಅಮ್ಮನ ಮುಂದೆ ಚಿಕ್ಕವರೆ. ಅಮ್ಮ ದೊಡ್ಡವರಿಗಿಂತ ದೊಡ್ಡವರು ಎಂಬ ಮಾತನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮಹಾ ಗಣಪತಿಯ ವಿಚಾರವನ್ನೇ ತೆಗೆದುಕೊಂಡಲ್ಲಿ ಆತ ತಾಯಿಯ ಆಜ್ಞೆಯನ್ನು ಪಾಲಿಸಲು ಹೋಗಿ ತನ್ನ ಶಿರವನ್ನೇ ಕಳೆದುಕೊಳ್ಳಬೇಕಾಗಿ ಬಂತು. ಅಷ್ಟರ ಮಟ್ಟಿನ ಮಾತೃ ಪ್ರೇಮವಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಅನಾಥಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ತದ್ವಿರುದ್ಧ ವಿಚಾರ ಎಂದು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಿಶ್ವೇಶ್ವರ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲ್ಪಡುವ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು.
ಮಹಾಗಣಪತಿಯಲ್ಲಿ ವಿನಯ ಮತ್ತು ಮಾತೃ ಪ್ರೇಮವನ್ನು ಮುಖ್ಯವಾಗಿ ಗಮನಿಸಬೇಕು. ಇವೆರಡು ನಮ್ಮಲ್ಲಿ ಇಲ್ಲದೇ ಹೋದರೆ ನಾವು ಪಾಶ್ಚಾತ್ಯರಾಗುವ ದಿನ ದೂರವಿಲ್ಲ. ಮಾತ್ರವಲ್ಲದೇ ಗಣಪತಿಯಿಂದ ವಿನಯವನ್ನು ಕಂಡುಕೊಳ್ಳಬೇಕು. ವಿನಯದೊಳಗೆ ಚಿಂತನೆ ಇದೆ, ತಾಳ್ಮೆಯಿದೆ, ವಿವೇಚನೆಯಿದೆ. ಅದನ್ನು ಗುರುತಿಸುವ, ಆಘ್ರಾಣಿಸುವ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆಯುವ ಕೆಲಸದಲ್ಲಿ ತೊಡಗಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸದಸ್ಯ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ ಹಿಂದೂ ಸಮಾಜವನ್ನು ಹಿಂದಿನ ಕಾಲಘಟ್ಟದಲ್ಲಿ ಗಟ್ಟಿಗೊಳಿಸುವ ಕಾರ್ಯವನ್ನು ಧಾರ್ಮಿಕ ಆಚರಣೆಗಳು ಮಾಡುತ್ತಿದ್ದವು. ಧಾರ್ಮಿಕ ಆಚರಣೆಗಳು ಹಿಂದೂಗಳನ್ನು ಒಂದುಗೂಡಿಸಲು ಸಹಕಾರಿಯಾಗಿದ್ದವು. ಇದಕ್ಕೆ ಗಣೇಶೋತ್ಸವವೇ ಸರಿಯಾದ ಉದಾಹರಣೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್ ಉಪಸ್ಥಿತರಿದ್ದರು. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ನವೀನ್ ಕೃಷ್ಣ ಸ್ವಾಗತಿಸಿ, ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್. ಜಿ. ಶ್ರೀಧರ್ ವಂದಿಸಿದರು. ಪಾಲಿಟಿಕ್ನಿಕ್ ಕಾಲೇಜಿನ ಉಪನ್ಯಾಸಕ ರವಿರಾಮ್ ಪ್ರಸ್ತಾವನೆಗೈದರು. ವಿದ್ಯಾರ್ಥಿ ಶ್ರೀವತ್ಸ ಟಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು.