VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜು ಸುವರ್ಣ ಮಹೋತ್ಸವ ಉದ್ಘಾಟನೆ – ಸ್ತ್ರೀಯರು ಧೈರ್ಯವಂತರಾಗಬೇಕು: ರಾಜ್ಯಪಾಲ ವಜುಭಾಯಿ ವಾಲಾ

ಪುತ್ತೂರು: ಭಾರತ ಕೇವಲ ಪುರುಷ ಪ್ರಧಾನ ರಾಷ್ಟ್ರವಲ್ಲ, ಮುಂದೆಯೂ ಆಗುವುದು ಸಾಧ್ಯವಿಲ್ಲ. ಅಷ್ಟಕ್ಕೂ ಸ್ತ್ರೀಯರೇ ಇಲ್ಲದೆ ಪುರುಷರು ಇರುವುದಕ್ಕೆ ಹೇಗೆ ಸಾಧ್ಯ? ಮಾತೃಶಕ್ತಿಯಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಸ್ತ್ರೀ ಶಿಕ್ಷಣಕ್ಕೆ ಅತ್ಯಧಿಕ ಒತ್ತು ಕೊಡುವ ಅಗತ್ಯವಿದೆ. ಅಂತೆಯೇ ಸ್ತ್ರೀಯರು ಧೈರ್ಯವಂತರಾಗಬೇಕು ಎಂದು ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಐದು ದಿನಗಳ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

News Photo - Golden Jubilee Inauguration
ಈ ದೇಶದ ವ್ಯಕ್ತಿತ್ವ ಪೂರ್ವಜರಿಂದಲೇ ರೂಪಗೊಂಡಿದೆ. ಸ್ವಾಮಿ ವಿವೇಕಾನಂದರು ಈ ದೇಶದ ಸಾರವನ್ನು ವಿಶ್ವದ ಸಮ್ಮುಖದಲ್ಲಿ ಸಾಕಾರಗೊಳಿಸಿದ್ದಾರೆ. ಹಾಗಾಗಿ ಭಾರತ ಪ್ರಪಂಚದ ಮುಂದೆ ವಿಶೇಷ ಸ್ಥಾನಮಾನವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದಲೇ ಭಾರತ ಇತರ ದೇಶಗಳಿಗೂ ಪ್ರೇರಣಾದಾಯಕವೆನಿಸಿದೆ. ವಿದೇಶಗಳ ತಂತ್ರತ್ಞಾನ, ಅಭಿವೃದ್ಧಿ ಹಾಗೂ ಹಿಂದೂಸ್ಥಾನದ ಸಂಸ್ಕಾರ ಇಂದು ಜಾಗತಿಕವಾಗಿ ವಿನಿಮಯಗೊಳ್ಳುತ್ತಿದೆ. ವಿದೇಶೀಯರಿಗೂ ಭಾರತ ಶಕ್ತಿ ಈಗ ಅರ್ಥವಾಗಿದೆ ಎಂದರು.
ವಿವೇಕಾನಂದರು ಭಾರತೀಯ ಸಂಸ್ಕೃತಿಯ ಪ್ರತೀಕ. ಸಂಖ್ಯಾತ್ಮಕ ಶಿಕ್ಷಣಕ್ಕಿಂತ ಗುಣಾತ್ಮಕ ಶಿಕ್ಷಣಕ್ಕೆ ಅವಕಾಶ ನೀಡಬೇಕು ಎಂದರಲ್ಲದೆ ವಿದ್ಯಾಕೇಂದ್ರ ಕೇವಲ ಅಕ್ಷರ ಜ್ಞಾನಕ್ಕಷ್ಟೇ ಸೀಮಿತವಾಗಬಾರದು. ಸಂಸ್ಕಾರವನ್ನೂ ನೀಡುವಂತಾಗಬೇಕು. ಆಗ ಮಾತ್ರ ಶಿಕ್ಷಣ ಸಾರ್ಥಕ್ಯವನ್ನು ಪಡೆದುಕೊಳ್ಳುತ್ತದೆ. ಇಡೀ ಜಗತ್ತಿನಲ್ಲಿ ಅತ್ಯುತ್ತಮ ಸಂಸ್ಕಾರಭರಿತ ಶಿಕ್ಷಣ ನೀಡುವ ರಾಷ್ಟ್ರ ಭಾರತ ಮಾತ್ರ. ಸಂಸ್ಕಾರವಂತ ಮಾತ್ರ ಈ ದೇಶಕ್ಕಾಗಿ ಕೆಲಸ ಮಾಡಬೇಕು, ಈ ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾನೆ. ಈ ದೇಶದಲ್ಲಿ ಈ ತೆರನಾದ ಚಿಂತನೆ ಜಾರಿಯಲ್ಲಿದೆ ಎಂದು ನುಡಿದರು.
ಜ್ಞಾನವಿದ್ದವನು ಸಾಧನೆ ಮಾಡುತ್ತಾನೆ. ಆದರೆ ಜ್ಞಾನದೊಂದಿಗೆ ಪ್ರತಿಯೊಬ್ಬನಿಗೂ ಆತ್ಮಸ್ಥೈರ್ಯ ಬೇಕು. ಧೈರ್ಯವಿಲ್ಲದವನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಶಿವಾಜಿ, ಝಾನ್ಸಿ ರಾಣಿ ಮಾದರಿಯಾಗಬೇಕು. ಯುವ ಜನತೆಯೆಂದರೆ ಬಿರುಗಾಳಿಯೊಂದಿಗೆ ಆಡುವವರು ಎಂದರು. ಹಿಂದೂ ಸ್ಥಾನದಲ್ಲಿ ಜನಿಸಿದ್ದಕ್ಕೆ ನಾವೇನಾದರೂ ಸಾಧನೆ ಮಾಡಬೇಕು ಎಂದು ಕರೆನೀಡಿದರು.
ಸುವರ್ಣ ಮಹೋತ್ಸವ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿದ ಕರ್ನಾಟಕ ವಲಯದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಎಂ.ಎಸ್.ರಾಮಾನುಜನ್, ಐಪಿಎಸ್ ಮಾತನಾಡಿ, ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ ಸವಿ ನೆನಪಾಗಿ ಉಳಿಯಲಿದೆ. ವಿಶಿಷ್ಟ ಇತಿಹಾಸವಾಗಿ ನಿಲ್ಲಲಿದೆ ಎಂದು ನುಡಿದರು.
ಸುವರ್ಣ ವಿವೇಕ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಹದಿನೇಳು ಇಂಜಿನಿಯರಿಂಗ್, ಎಂಟು ಮೆಡಿಕಲ್ ಹಾಗೂ ನೂರೈವತ್ತಕ್ಕೂ ಮಿಗಿಲಾದ ಪದವಿ ಕಾಲೇಜುಗಳನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕಾಶಿ. ಒಂದು ಶಿಕ್ಷಣ ಸಂಸ್ಥೆಗೆ ಎಷ್ಟು ವರ್ಷ ವಯಸ್ಸಾಯಿತು ಅನ್ನುವುದು ಮುಖ್ಯವಲ್ಲ ಬದಲಾಗಿ ಆ ಸಂಸ್ಥೆ ಸಮಾಜಕ್ಕೆ ಏನು ಕೊಟ್ಟಿದೆ ಅನ್ನುವುದು ಮುಖ್ಯ. ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಉರಿಮಜಲು ಕೆ.ರಾಮ ಭಟ್, ಶಾಸಕಿ ಶಕುಂತಲಾ ಟಿ.ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಿಂದ ವಂದೇ ಮಾತರಂ ಪ್ರಾರ್ಥನೆ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಪ್ರಸ್ತಾವಿಸಿದರು. ಸಮಿತಿಯ ಕಾರ್ಯದರ್ಶಿ ಪ್ರೊ.ಎ.ವಿ.ನಾರಾಯಣ ವಂದಿಸಿದರು. ಪ್ರಾಧ್ಯಾಪಕರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಡಾ.ಶ್ರೀಧರ ಎಚ್.ಜಿ, ಡಾ.ಆಶಾಸಾವಿತ್ರಿ ಕಾರ್ಯಕ್ರಮ ನಿರ್ವಹಿಸಿದರು.