ಗ್ರಾಮದ ಅಭಿವೃದ್ಧಿ ಜತೆಗೆ ದೇಶದ ಅಭಿವೃದ್ಧಿ : ಡಾ. ಕೆ. ಪ್ರಭಾಕರ್ ಭಟ್
ಪುತ್ತೂರು, ಅ.೩೦: ಸಹಕಾರದ ಚಿಂತನೆಯು ಸಮಾಜದ ಅಭಿವೃದ್ಧಿಯಲ್ಲಿ ಜನರನ್ನು ತೊಡಗಿಸಿಕೊಳ್ಳುವಂತೆ ಮಾಡುವ ಯೋಜನೆಯಾಗಿದೆ. ನಮ್ಮ ಗ್ರಾಮದಲ್ಲಿರುವ ಕುಂದು-ಕೊರತೆಗಳನ್ನು ಪಟ್ಟಿಮಾಡಿ, ಅವುಗಳ ನಿವಾರಣೆಗಾಗಿ ಜನರನ್ನು ತಂಡಗಳನ್ನಾಗಿ ಮಾಡಿಕೊಂಡು ಶ್ರಮಿಸುವ ಅಗತ್ಯವಿದೆ. ಈ ರೀತಿಯಾಗಿ ಶ್ರಮಿಸುವುದರಿಂದ ಗ್ರಾಮದ ಅಭಿವೃದ್ಧಿಯ ಜೊತೆಗೆ ದೇಶವೂ ಅಭಿವೃದ್ಧಿಯನ್ನು ಹೊಂದುತ್ತದೆ. ಇದಕ್ಕಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘವು 35 ಗ್ರಾಮಗಳಲ್ಲಿ ನಿರಂತರವಾಗಿ ಗ್ರಾಮ ವಿಕಾಸ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ ಪ್ರಭಾಕರ್ ಭಟ್ ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಹಾಗೂ ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗ ಇದರ ಜಂಟಿ ಸಹಯೋಗದಲ್ಲಿ ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಡೆದ ‘ಗ್ರಾಮ ವಿಕಾಸ ಸಮಾಲೋಚನ ಸಭೆ’ಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಗ್ರಾಮವಿಕಾಸ ದಕ್ಷಿಣ ಪ್ರಾಂತ್ಯದ ಸಂಯೋಜಕ ಬಾಲಕೃಷ್ಣ ಕಿಣಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಮತ್ತು ೩೫ ಗ್ರಾಮಗಳ ಸದಸ್ಯರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು. ಗ್ರಾಮ ವಿಕಾಸ ಮಂಗಳೂರು ವಿಭಾಗದ ಸಂಯೋಜಕ ಶ್ರೀನಿವಾಸ್ ಉಬರಡ್ಕ ಸ್ವಾಗತಿಸಿ, ನರೇಂದ್ರ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ವಿಘ್ನೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭ ೩೫ ಗ್ರಾಮಗಳಲ್ಲಿ ಗ್ರಾಮವಿಕಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ 80ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.