VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಗುರು ಪದವಿ ಜಾತಿಯನ್ನು ಆಧರಿಸಿದ್ದಲ್ಲ: ವೇದಮೂರ್ತಿ ನಾಗರಾಜ ಭಟ್

ಪುತ್ತೂರು: ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ನೀಡುವಾತ ಗುರು. ಅಂತಹ ಗುರುಗಳಲ್ಲಿ ವಿಶ್ವಗುರು ಎಂದೆನ್ನಿಸಿದ ವೇದವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮಾ ದಿನವಾಗಿ ಆಚರಿಸಲಾಗುತ್ತಿದೆ. ಗುರು ಎಂಬ ಪದವಿ ಜಾತಿಯನ್ನು ಆಧರಿಸಿ ಬಂದದ್ದಲ್ಲ ಎಂಬುದಕ್ಕೆ ಬೆಸ್ತ ಕುಲದಲ್ಲಿ ಜನಿಸಿದ ವೇದವ್ಯಾಸರೇ ಸಾಕ್ಷಿ ಎಂದು ಸುಳ್ಯದ ಶ್ರೀ ಕೇಶವ ಕೃಪಾ ವೇದ ಪಾಠ ಶಾಲೆಯ ವೇದಮೂರ್ತಿ ನಾಗರಾಜ ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ನಡೆದ ಗುರು ಪೂರ್ಣಿಮಾ ಆಚರಣೆ ಮತ್ತು ವಿಕಾಸಂ ಸಂಸ್ಕೃತ ಸಂಘದ ಉದ್ಘಾಟನೆಯನ್ನು ಮಾಡಿ ಸೋಮವಾರ ಮಾತನಾಡಿದರು.

ಗುರುತನಕ್ಕೆ ಮಿತಿ ಇಲ್ಲ. ಯಾವುದೇ ವಿಷಯದಲ್ಲಿ ಜ್ಞಾನವನ್ನು ತುಂಬಿದರೂ ಆತ ಗುರುವಾಗಬಲ್ಲ. ಮಾತ್ರವಲ್ಲದೇ ಕಲಿಯುವಿಕೆಯಲ್ಲಿ ಅಹಂಕಾರ ಸಲ್ಲದು. ಒಂದು ವೇಳೆ ಅಹಂಕಾರ ಪಟ್ಟಿದ್ದೇವೆ ಎಂದಾದಲ್ಲಿ ಹಲವು ವಿಚಾರಗಳನ್ನು ತಿಳಿಯುವುದನ್ನು ಕಳೆದುಕೊಳ್ಳುತ್ತೇವೆ. ಅದಕ್ಕಾಗಿ ಗುರುವನ್ನು ಗೌರವಿಸಬೇಕು. ಗುರಿಯನ್ನು ಮುಟ್ಟುವುದರಲ್ಲಿ ಗುರುವಿನ ಮಹತ್ವ ಮಹತ್ತರವಾದದ್ದು ಎಂದು ತಿಳಿಸಿದರು.

ಕಾರ್ಯದಲ್ಲಿ ಪಾಲ್ಗೊಂಡ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಭಾರತೀಯ ಮೂರು ಮುಖ್ಯ ಭಾಷೆಗಳಲ್ಲಿ ಸಂಸ್ಕೃತ ಭಾಷೆ ಒಂದಾಗಿದೆ. ವೇದಗಳ ಕಾಲದಿಂದ ತೊಡಗಿದಂತೆ ಎರಡನೇ ಶತಮಾನದವರೆಗೂ ಸಂಸ್ಕೃತ ಜನರ ಆಡು ಮಾತಾಗಿ ಬೆಳೆದು ಬಂದಿರುವುದನ್ನು ಕಾಣಬಹುದು. ಸಂಸ್ಕೃತ ಭಾಷೆ ಅಂದಿನ ಕಾಲದಲ್ಲಿ ಒಂದು ವರ್ಗಕ್ಕೆ ಮಾತ್ರ ಮೀಸಲಾಗಿತ್ತು. ಈ ಕಾರಣದಿಂದ ಸಂಸ್ಕೃತ ಭಾಷೆ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳಲು ಕಾರಣವಾಯಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಜಯರಾಮ ಭಟ್ ಮಾತನಾಡಿ ಗುರು ಎಂದರೇ ಜ್ಞಾನದ ಬೆಳಕು. ತಂದೆತಾಯಿ ಜನ್ಮ ನೀಡುವ ಮೂಲಕ ಭೂಮಿಗೆ ತಂದರೆ ಗುರು ಜ್ಞಾನವನ್ನು ತುಂಬುವ ಮೂಲಕ ನಿಜವಾದ ಮಾನವನನ್ನಾಗಿಸಬಲ್ಲ. ತಾಯಿತನ, ತಂದೆತನವೆಂಬ ಪದವಿಯಷ್ಟೇ ಮಹತ್ತರವಾದ ಪದವಿ ಗುರುತನದ್ದು. ಮನುಷ್ಯ ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳೂ ಕೂಡ ಗುರುವಾಗಬಲ್ಲದು. ಅವುಗಳಿಂದ ಕಲಿಯುವುದು ಬಹಳವಿದೆ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕ ವೇದಮೂರ್ತಿ ನಾಗರಾಜ ಭಟ್ಟರನ್ನು ಸನ್ಮಾನಿಸಲಾಯಿತು. ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ. ಉಮಾದೇವಿ ಉಪಸ್ಥಿತರಿದ್ದರು. ಸಂಯೋಜಕ ಡಾ. ಶ್ರೀಶಕುಮಾರ ಯಂ.ಕೆ ಪ್ರಸ್ತಾವನೆಗೈದರು.  ಸಂಘದ ಅಧ್ಯಕ್ಷ ಈಶ್ವರ ಶರ್ಮ ಸ್ವಾಗತಿಸಿ, ಕಾರ್ಯದರ್ಶಿ ವಸುಂದರಾ ಲಕ್ಷ್ಮೀ ವಂದಿಸಿದರು. ವಿದ್ಯಾರ್ಥಿನಿ ಅಪರ್ಣಾ ನಿರ್ವಹಿಸಿದರು.