ಹನುಮಂತನ ಗುಣಗಳು ವಿದ್ಯಾರ್ಥಿಗಳಿಗೆ ಮಾದರಿ : ಪ್ರೊ.ಶ್ರೀಧರ್ ಭಟ್
ಪುತ್ತೂರು: ವಾಯುಪುತ್ರ ಹನುಮಂತ ಶಕ್ತಿಯ ಸಂಕೇತ. ವಾಯುವೇಗದಲ್ಲಿ ತನ್ನ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿದವನು. ಹಿಂದಿಯ ಶ್ರೇಷ್ಟ ಸಂತ ಕವಿ ಗೋಸಾಮಿ ತುಳಸೀದಾಸರ ಹನುಮಾನ್ ಚಾಲೀಸಾ ಸಾರ್ವಕಾಲಿಕ ಮಹತ್ವವುಳ್ಳ ಕಾವ್ಯ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಹಿಂದಿ ಪ್ರಾಧ್ಯಾಪಕ ಪ್ರೊ.ಎಲ್.ಶ್ರೀಧರ ಭಟ್ ಹೇಳಿದರು.
ಅವರು ಕಾಲೇಜಿನ ಹಿಂದಿ ವಿಭಾಗ, ಹಿಂದಿ ಸಂಘ ಹಾಗೂ ಮಹಿಳಾ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಹನುಮಾನ್ ಚಾಲೀಸಾ ಪಠಣ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮನ ಪರಮ ಭಕ್ತನಾದ ಹನುಮಂತನ ಭಕ್ತಿ, ಶ್ರದ್ಧೆ, ಶಕ್ತಿ, ಏಕಾಗ್ರತೆ ಇಂದಿನ ಯುವಜನತೆಗೆ ಮಾರ್ಗದರ್ಶನವಾಗಬೇಕು. ತನ್ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಬೇಕು. ಯುವಮನಸ್ಸುಗಳಲ್ಲಿ ಸಂಸ್ಕೃತಿ-ಸಂಸ್ಕಾರಗಳು ಉದ್ದೀಪನಗೊಳ್ಳಬೇಕು, ಸದೃಢ ಸುಂದರ ಭಾರತದ ನಿರ್ಮಾಣವಾಗಬೇಕು ಎಂದು ಹಾರೈಸಿದರು.
ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಥಮ ಪದವಿಯ ಮೊದಲ ಸೆಮೆಸ್ಟರ್‌ನ ಹಿಂದಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪ್ರಥಮ ಬಿಬಿಎಂನ ಅನಿರುದ್ಧ್, ಬಲರಾಮ್ ಹಾಗೂ ಪ್ರಥಮ ಬಿ.ಕಾಂನ ಸ್ವಾತಿ ಇವರಿಗೆ ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿರುವ ಪ್ರೊ.ಎಲ್.ಶ್ರೀಧರ ಭಟ್ ದತ್ತಿನಿಧಿ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಹಿಂದಿ ವಿಭಾಗ ಮುಖ್ಯಸ್ಥೆ ಡಾ.ದುರ್ಗಾರತ್ನ ಪ್ರಸ್ತಾವನೆಗೈದರು. ಉಪನ್ಯಾಸಕಿ ಡಾ.ಆಶಾಸಾವಿತ್ರಿ ಸ್ವಾಗತಿಸಿ, ವಿದ್ಯಾರ್ಥಿನಿ ಅಮೃತ ವಂದಿಸಿದರು.