ಕುಡಿಪಾಡಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ – ಸಮಗ್ರ ಅಭಿವೃದ್ಧಿ ಮತ್ತು ಆರೋಗ್ಯ ಇಂದಿನ ಅಗತ್ಯ : ಡಾ.ಕೃಷ್ಣ ಭಟ್
ಪುತ್ತೂರು: ಸಾಮಾನ್ಯವಾಗಿ ಜನ ವೈಯಕ್ತಿಕ ಆರೋಗ್ಯದ ಬಗೆಗೆ ಅತೀವ ಚಿಂತನೆ ನಡೆಸುತ್ತಾರೆ. ಆದರೆ ನಮ್ಮ ನಮ್ಮ ದೇಹಾರೋಗ್ಯದ ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ಸಾಮುದಾಯಿಕ ಆರೋಗ್ಯವೂ ಅತ್ಯಂತ ಅಗತ್ಯ. ಹಾಗಾದಾಗ ಮಾತ್ರ ದೇಶ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.
ಅವರು ವಿವೇಕಾನಂದ ಕಾಲೇಜು ದತ್ತು ಸ್ವೀಕರಿಸಿರುವ ಕುಡಿಪಾಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಿಕಾಸ ಸಮಿತಿ, ವಿವೇಕಾನಂದ ಕಾಲೇಜು, ರೋವರ್‍ಸ್ ಅಂಡ್ ರೇಂಜರ್‍ಸ್ ಘಟಕ, ರೋಟರಿ ಕ್ಲಬ್, ರೆಡ್ ಕ್ರಾಸ್ ಸೊಸೈಟಿ ಮತ್ತು ಅತ್ತಾವರದ ಕೆ.ಎಂ.ಸಿ ಆಸ್ಪತ್ರೆಗಳ ಸಹಯೋಗದಲ್ಲಿ ಆಯೋಜಿಸಲಾದ ಒಂದು ದಿನದ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಎನ್ನುವ ಶಬ್ದವೂ ವಿವಿಧ ಆಯಾಮಗಳನ್ನು ಹೊಂದಿದೆ. ಸಮಗ್ರ ಅಭಿವೃದ್ಧಿಯನ್ನು ಲಕ್ಷ್ಯವಾಗಿರಿಸಿ ಮುಂದುವರಿಯಬೇಕು. ಆರೋಗ್ಯ, ಅಭಿವೃದ್ಧಿ ವಿಚಾರಗಳ ಬಗೆಗೆ ಜಾಗೃತಿ ಮೂಡಬೇಕು. ಈ ಹಿನ್ನಲೆಯಲ್ಲಿ ನಾಗರಿಕರು, ಶಿಕ್ಷಣ ಸಂಸ್ಥೆಗಳು, ಸಮಾಜ ಸೇವಾಕರ್ತರೆಲ್ಲರೂ ಒಂದಾಗಿ ಕಾರ್ಯತತ್ಪರರಾಗಬೇಕಾದ ಅಗತ್ಯವಿದೆ ಎಂದು ನುಡಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಸಂಚಾಲಕ ಎಂ.ಟಿ ಜಯರಾಮ ಭಟ್, ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ.ಅಶೋಕ್ ಪಡಿವಾಳ, ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಆಸ್ಕರ್ ಆನಂದ, ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಸುಕುಮಾರ ಹಾಗೂ ಕುಡಿಪಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರಿಧರ ಗೋಮುಖ ಮತ್ತಿತರರು ಉಪಸ್ಥಿತರಿದ್ದರು. ಕುಡಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕೊಂಟ್ರುಪಾಡಿ ಅಧ್ಯಕ್ಷತೆ ವಹಿಸಿದ್ದರು.
ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಕಾಲೇಜಿನ ಎನ್ ಎಸ್ ಎಸ್ ಘಟಕದ ಸಂಚಾಲಕ ಡಾ.ರೋಹಿಣಾಕ್ಷ ವಂದಿಸಿದರು. ಸಂಸ್ಕರತ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ ಎಂ.ಕೆ ಕಾರ್ಯಕ್ರಮ ನಿರ್ವಹಿಸಿದರು.