ಹಿಂದಿ ಜನಮಾನಸದ ಭಾಷೆ : ಸರಸ್ವತಿ.ಜಿ.ಪಿ
ಪುತ್ತೂರು: ಹಿಂದಿ ಜನಸಾಮಾನ್ಯರ ಭಾಷೆ. ಇದಕ್ಕೆ ಭಾರತೀಯರನ್ನು ಒಂದಾಗಿಸುವ ಶಕ್ತಿಯಿದೆ. ಇದು ಜನರ ಭಾವನೆಯನ್ನು ಒಟ್ಟುಗೂಡಿಸಲು ಉತ್ತಮ ಮಾಧ್ಯಮ. ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಕಲಿಯುವತ್ತ ಗಮನಕೊಡಬೇಕು. ಅದಕ್ಕಾಗಿ ಹೆಚ್ಚು ಪುಸ್ತಕಗಳನ್ನು ಓದಬೇಕು ಎಂದು ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾದ ಪ್ರಚಾರಕಿ ಹಾಗೂ ಸುಧಾನ ವಸತಿಶಾಲೆಯ ಹಿಂದಿ ಶಿಕ್ಷಕಿ ಸರಸ್ವತಿ.ಜಿ.ಪಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಹಿಂದಿ ಸಂಘದಿಂದ ಆಯೋಜಿಸಿದ ಹಿಂದಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು
ಹಿಂದಿಯನ್ನು ಕಲಿಯುವ ಮುಖಾಂತರ ಅನೇಕ ವಿಚಾರಗಳ ಜ್ಞಾನವನ್ನು ಪಡೆಯಬಹುದು. ಅಲ್ಲದೇ ಜನರ ನಡುವೆ ಉತ್ತಮ ಸಂಬಂಧವನ್ನು ಬೆಳೆಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲರೂ ಹಿಂದಿ ಭಾಷೆಯನ್ನು ಕಲಿಯುವ ಮೂಲಕ ಪ್ರಚಾರ ಕಾರ್ಯವನ್ನು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್‍ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಹಿಂದಿ ನಮ್ಮ ರಾಷ್ಟ್ರ ಭಾಷೆ. ಅದನ್ನು ಕಲಿಯುವತ್ತ ಆಸಕ್ತಿವಹಿಸಬೇಕು. ಉದ್ಯೋಗದ ದೃಷ್ಟಿಯಿಂದ ಮಾತ್ರವಲ್ಲದೇ ಜ್ಞಾನದ ದೃಷ್ಟಿಯಿಂದ ಅರಿತುಕೊಳ್ಳಬೇಕು ಎಂದು ನುಡಿದರು.
ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಿಂದಿ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ಹಿಂದಿ ಸಂಘದ ಆಯೋಜಕಿ ಡಾ.ಆಶಾ ಸಾವಿತ್ರಿ ಮತ್ತು ಹಿಂದಿ ವಿಭಾಗ ಮುಖ್ಯಸ್ಥೆ ಡಾ. ದುರ್ಗರತ್ನಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಅನಿರುದ್ಧ ಸ್ವಾಗತಿಸಿ, ವಿದ್ಯಾರ್ಥಿನಿ ನಿವೇದಿತಾ ವಂದಿಸಿದರು,ವಿದ್ಯಾರ್ಥಿ ಲೋಕೇಂದರ್ ಸಿಂಗ್ ನಿರ್ವಹಿಸಿದರು.