ಭಾಷೆ ಇಲ್ಲದೆ ವಿಜ್ಞಾನವಿಲ್ಲ : ಡಾ.ರಾಧಾಕೃಷ್ಣ ಬೆಳ್ಳೂರು
ಪುತ್ತೂರು: ಭಾಷೆ ಇಲ್ಲದೆ ವಿಜ್ಞಾನವಿಲ್ಲ. ಭಾಷೆ ಹಾಗೂ ಲಿಪಿಯನ್ನು ಬಳಸುವ ಮೂಲಕ ಮಾಹಿತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸಲು ಸಾಧ್ಯ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗ, ಪಾರಂಪರಿಕ ಕೂಟಗಳ ವತಿಯಿಂದ ಆಯೋಜಿಸಲ್ಪಟ್ಟ ’ಹಸ್ತ ಪ್ರತಿಗಳು ಹಾಗೂ ಅದರ ಪ್ರಾಮುಖ್ಯತೆ’ ಎಂಬ ಮಾಹಿತಿ ಕಾರ್‍ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಾಳೆಗರಿ ಲಿಪಿಗಳು ಕೊರೆಯುವ ಅಕ್ಷರ ರಚನೆಯ ವಿಧಾನಕ್ಕೆ ಸಂಬಂಧ ಪಟ್ಟದ್ದು. ಅವುಗಳು ಹಿಂದಿನ ಕಾಲಕ್ಕೆ ಸಂಬಂದಿಸಿದ ಅಮೂಲ್ಯವಾದ ಮಾಹಿತಿ ಒಳಗೊಂಡಿವೆ. ನಮ್ಮ ಅಜ್ಞಾನದಿಂದ ಅವುಗಳಿಂದ ಸಿಗಬಹುದಾದ ಜ್ಞಾನವನ್ನು ನಾವು ಕಳೆದು ಕೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೆಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಹಸ್ತ ಪ್ರತಿಗಳು ನಮ್ಮ ನಾಡಿನ ಹಿರಿಮೆಯನ್ನು ಪ್ರಪಂಚzಲ್ಲಿ ಎತ್ತಿ ಹಿಡಿಯವ ಸಾಧನಗಳು. ಅನೇಕ ವಿದೇಶಿಗರು ಇಲ್ಲಿಗೆ ಬರುವುದು ನಮ್ಮ ಐತಿಹಾಸಿಕ ಪರಂಪರೆಯನ್ನು ಅಧ್ಯಯನ ಮಾಡುವುದಕ್ಕಾಗಿ ಮತ್ತು ಅವರು ನಾವು ಬೇಡವೆಂದು ಎಸೆದ ಇಂತಹ ಲಿಪಿಗಳ ಮಹತ್ವ ತಿಳಿದಿದ್ದಾರೆ. ಎಂದರು
ವಿದ್ಯಾರ್ಥಿ ಶಿವಶಂಕರ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯಕ್ ಪ್ರಸ್ತಾವನೆ ಗೈದರು. ಉಪನ್ಯಾಸಕ ಪ್ರಮೋದ್ ಎಂ ಜಿ ಸ್ವಾಗತಿಸಿದರು. ಉಪನ್ಯಾಸಕಿ ವಿದ್ಯಾಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿ ನಿತಿನ್ ಕಾರ್ಯಕ್ರಮ ನಿರೂಪಿಸಿದರು