’ಹುಡುಗಿಯರು ಕೃಷಿಕರನ್ನು ಮದುವೆಯಾಗುತ್ತೇವೆಂದು ಶಪಥ ಮಾಡಬೇಕು’ – ವಿವೇಕಾನಂದದ ರಾಜ್ಯಮಟ್ಟದ ಕೃಷಿಗೋಷ್ಟಿಯಲ್ಲಿ ಪತ್ರಕರ್ತ ಕುಂಟಿನಿ
ಪುತ್ತೂರು: ಹುಡುಗಿಯರು ಕೃಷಿಕರನ್ನೇ ಮದುವೆಯಾಗುತ್ತೇವೆಂದು ಶಪಥ ಮಾಡಬೇಕು. ಆಗ ಎಲ್ಲಾ ಯುವಕರೂ ಕೃಷಿಯಲ್ಲಿ ತೊಡಗುತ್ತಾರೆ. ಯಾಕೆಂದರೆ ಕೃಷಿಕರಿಗೆ ಹೆಣ್ಣು ಸಿಗದಿರುವುದೂ ಯುವ ಜನತೆ ಕೃಷಿಯಿಂದ ಹಿಂದೆ ಸರಿಯುವುದಕ್ಕೆ ಕಾರಣ ಎಂದು ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಸಂಕಿರಣದಲ್ಲಿ ಭಾಗವಹಿಸಿ ಕೃಷಿಯಲ್ಲಿ ಶಿಕ್ಷಿತ ಯುವಜನಾಂಗದ ಅನುಭವಗಳು ಎಂಬ ವಿಚಾರವಾಗಿ ಮಾತನಾಡಿದರು.
ಇಂದು ಕೃಷಿಮೂಲದಿಂದ ಬಂದವರೇ ಕೃಷಿಯನ್ನು ಮರೆಯುತ್ತಿದ್ದಾರೆ. ಕೃಷಿಯ ಬಗೆಗೆ ಮಾತನಾಡಬೇಕಾದರೆ ಕೃಷಿಯೊಂದಿಗೆ ಬೆಳೆದಿರಬೇಕು. ಕೃಷಿಯೊಂದಿಗೆ ಅನುಸಂಧಾನ ನಡೆಸಬೇಕು. ಎಷ್ಟೇ ಶಿಕ್ಷಣ ನಾವು ಹೊಂದಿದ್ದರೂ ಬಾಳೆಗೊನೆಯಲ್ಲಿನ ಕಾಯಿಗಳನ್ನು ಲೆಕ್ಕ ಹಾಕಲು ಬರುವುದಿಲ್ಲ ಎಂದಾದರೆ ಆತನನ್ನು ಶಿಕ್ಷಿತ ಎನ್ನಲು ಸಾಧ್ಯವೇ? ಕೃಷಿ ಹೊರತಾದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಖಿನ್ನತೆಗೆ ಒಳಗಾಗುತ್ತಿರುವುದು ಆಗಾಗ ಕಂಡು ಬರುತ್ತದೆ. ಹೊಸತಲೆಮಾರು ಕೃಷಿಯತ್ತ ಆಸಕ್ತಿ ಬೆಳೆಸಬೇಕು ಎಂದು ನುಡಿದರು.
ಮತ್ತೋರ್ವ ಯುವ ಕೃಷಿಕ ಅನಂತರಾಮ ಕೃಷ್ಣ ಮಾತನಾಡಿ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ನಡೆಸುವುದು ಸೂಕ್ತ. ಏಕ ಕೃಷಿಯನ್ನು ಅವಲಂಬಿಸದೆ ಅಂತರ್ ಬೆಳೆಗಳನ್ನು ಬೆಳೆಸಬೇಕು. ಯಂತ್ರದ ಬಳಕೆ ವ್ಯಾಪಕವಾಗಬೇಕು. ಇರುವ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಸುವ ಯೋಜನೆ ಹಾಕಿಕೊಳ್ಳಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕೃಷಿಕ ಸೇಡಿಯಾಪು ಜನಾರ್ದನ ಭಟ್ ಮಾತನಾಡಿ ಕೃಷಿಯಲ್ಲಿ ನೂತನ ಆವಿಷ್ಕಾರ ಜಾರಿಗೊಳ್ಳಬೇಕು. ಒಂದು ಎಕರೆ ಭೂಮಿಯಲ್ಲಿ ಇಪ್ಪತ್ತು ಲಕ್ಷ ಗಳಿಸುವುದಕ್ಕೆ ಕೃಷಿಯಲ್ಲೇ ಸಾಧ್ಯವಿದೆ. ಆದರೆ ಶ್ರಮಪಟ್ಟು ಕೃಷಿ ಮಾಡಬೇಕು ಅಷ್ಟೆ ಎಂದು ನುಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.