ವಿಜ್ಞಾನ ಸಂಘದಿಂದ ಇನ್ ಡೆಪ್ತ್ ಕಾರ್ಯಕ್ರಮ
ಪುತ್ತೂರು: ದೇಶದ ಅಭಿವೃದ್ಧಿಗೆ ಸಂಶೋಧನೆ ಅತ್ಯಂತ ಅಗತ್ಯ. ಮೂಲವಿಜ್ಞಾನದ ಮಾಹಿತಿಗಳು ಸಂಶೋಧನೆ ಮುಂದುವರಿಯಲು ಸಹಾಯಕವಾಗುತ್ತವೆ. ಹಾಗಾಗಿ ಮೂಲ ವಿಜ್ಞಾನದ ಕಲಿಕೆಯತ್ತ ವಿದ್ಯಾರ್ಥಿಗಳು ಗಮನ ನೀಡಬೇಕು. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪೈ ಹೇಳಿದರು.
ಅವರು ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ೩೩ನೇ ಇನ್‌ಡೆಪ್ತ್ ವಿಜ್ಞಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದ ಕಡೆಗೆ ಗಮನಹರಿಸುವಂತೆ ಮಾಡಲು ಇನ್ ಡೆಪ್ತ್ ಕಾರ್ಯಕ್ರಮವು ಪ್ರಾಮುಖ್ಯತೆ ವಹಿಸುತ್ತದೆ. ಹೆಚ್ಚು ಹೆಚ್ಚು ವಿಜ್ಞಾನದ ಕಲಿಕೆಯ ಕಡೆ ಗಮನ ನೀಡಲು ಇದು ಪೂರಕವಾಗುತ್ತದೆ. ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಜ್ಞಾನ ಹೆಚ್ಚಿಸಲು ಇನ್ ಡೆಪ್ತ್ ಕಾರ್ಯಕ್ರಮದಿಂದ ಸಾಧ್ಯ ಎಂದರು.
ವಿವೇಕಾನಂದ ಕಾಲೇಜಿನ ಪ್ರಾಚಾರ್‍ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಸಂಯೋಜಕ ಪ್ರೊ.ಶಿವಪ್ರಸಾದ್ ಸ್ವಾಗತಿಸಿ, ಇನ್ ಡೆಪ್ತ್ ಕಾರ್ಯಕ್ರಮ ಸಂಯೋಜಕ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ವಂದಿಸಿದರು. ವಿದ್ಯಾರ್ಥಿನಿಯರಾದ ಸುನಾದ ಹಾಗೂ ರಮ್ಯ ಪ್ರಾರ್ಥಿಸಿದರು, ಸಸ್ಯಶಾಸ್ತ್ರ ಉಪನ್ಯಾಸಕಿ ಡಾ. ಸ್ಮಿತಾ ಪಿ.ಜೆ ಹಾಗೂ ದಿವ್ಯ ಶ್ರೀ ನಿರ್ವಹಿಸಿದರು.