ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ
ಪುತ್ತೂರು: ವಿದ್ಯಾರ್ಥಿಗಳು ಹೆಚ್ಚು ಧೈರ್ಯವಂತರಾಗಬೇಕು, ವಿನಯವಂತರಾಗಬೇಕು ಮಾತ್ರವಲ್ಲದೆ ತಾನು ಓದುತ್ತಿರುವ ಸಂಸ್ಥೆಯ ಬಗೆಗೆ ಅಪಾರ ಗೌರವವನ್ನು ಹೊಂದಬೇಕು. ಬದುಕನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಬೇಕು. ಆಗ ಬದುಕು ಅರ್ಥಪೂರ್ಣಗೊಳ್ಳುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮುಂಬೈಯ ಕ್ಲೋರಿಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶನ್ ಶೆಟ್ಟಿ ಮೆನಾಲ ಹೇಳಿದರು.
ಅವರು ಇಲ್ಲಿನ ಶುಕ್ರವಾರ ಕಾಲೇಜಿನಲ್ಲಿ ವಿವೇಕಾನಂದ ಕಾಲೇಜಿನ ೨೦೧೪-೧೫ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ರಾಷ್ಟ್ರಧ್ವಜದಲ್ಲಿನ ಚಕ್ರ ನಮ್ಮ ಜೀವನಚಕ್ರವನ್ನು ಪ್ರತಿನಿಧಿಸುತ್ತದೆ. ಬದುಕು ಚಕ್ರದಂತೆ ಬದಲಾಗುತ್ತಲೇ ಇರುತ್ತದೆ. ಇಂತಹ ಚಲನಶೀಲ ಬದುಕಿನಲ್ಲಿ ಹೊಸತನಗಳು ಅವ್ಯಾಹತವಾಗಿ ರೂಪುಗೊಳ್ಳುತ್ತಲೇ ಇರಬೇಕು. ಜತೆಗೆ ವಿದ್ಯಾರ್ಥಿಗಳು ವೇಗವನ್ನು ಮೈಗೂಡಿಸಿಕೊಳ್ಳಬೇಕು. ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳನ್ನು ಪ್ರಸ್ತುತ ಸಂದರ್ಭದ ಚಲನಶೀಲತೆಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಮಾತ್ರವಲ್ಲದೆ ಸಮಾಜಕ್ಕೆ ಬೇಕಾದಂತಹ ಶೀಕ್ಷಣವನ್ನು ನೀಡುತ್ತಿದೆ. ಹಾಗಾಗಿಯೇ ಇಲ್ಲಿನ ವಿದ್ಯಾರ್ಥಿ ಎಂದು ಗುರುತಿಸಿಕೊಳ್ಳುವುದೇ ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಹೆತ್ತವರು ನಮ್ಮ ಜೀವನದಲ್ಲಿ ಬಹಳ ಮುಖ್ಯ. ಅಂತೆಯೇ ವಿದ್ಯೆಯನ್ನು ನೀಡಿದ ಗುರುಗಳನ್ನು ಅಪಾರವಾಗಿ ಗೌರವಿಸಬೇಕು. ಆಗ ನಮ್ಮ ವ್ಯಕ್ತಿತ್ವ ಉತ್ತಮ ರೀತಿಯನ್ನು ಬೆಳೆದುಕೊಳ್ಳುತ್ತದೆ ಎಂದರಲ್ಲದೆ ಸೋಲು ಮತ್ತು ಗೆಲುವು ಬದುಕಿನ ಭಾಗವೇ ಆಗಿದೆ. ಆದ್ದರಿಂದ ಅವೆರಡನ್ನೂ ಸಮಾನವಾಗಿ ಸ್ವೀಕರಿಸಿ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ, ನಾಯಕ್ತವ ಎಂದರೆ ಮತ್ತೊಬ್ಬರನ್ನು ತಮ್ಮ ಪ್ರಭಾವಕ್ಕೆ ಒಳಪಡುವಂತೆ ಮಾಡುವುದಷ್ಟೇ ಅಲ್ಲ, ತಾವೂ ಮತ್ತೊಬ್ಬರ ಹಾಗೂ ಮತ್ತೊಂದು ಒಳ್ಳೆಯ ಸಂಗತಿಯಿಂದ ಪ್ರಭಾವಕ್ಕೊಳಗಾಗುವುದೂ ಆಗಿದೆ. ವಿವೇಕಾನಂದ ಕಾಲೇಜಿನಲ್ಲಿ ಚುನಾವಣೆ ಅತ್ಯಂತ ಸಸೂತ್ರವಾಗಿ ಹಾಗೂ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡುತ್ತಾ, ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಜವಾಬ್ಧಾರಿಯನ್ನು ಅರಿತುಕೊಂಡು ಮುನ್ನಡೆಯಬೇಕು. ಎರಡೂವರೆ ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಾಗುವುದು ಬಹುದೊಡ್ಡ ಹೆಮ್ಮೆಯ ಸಂಗತಿ ಎಂದರಲ್ಲದೆ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಆಡಳಿತ ಮಂಡಳಿಯವರೆಲ್ಲರೂ ಸೇರಿಕೊಂಡು ಕಾಲೇಜಿನ ಘನತೆಯನ್ನು ಎತ್ತರಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ವಿಕಸನ ಮಾಸ ಪತ್ರಿಕೆಯ ಚುನಾವಣಾ ವಿಶೇಷ ಸಂಚಿಕೆಯನ್ನು ಪಿ.ಶ್ರೀನಿವಾಸ ಪೈ ಬಿಡುಗಡೆಗೊಳಿಸಿದರು.
ವಿದ್ಯಾರ್ಥಿ ಕ್ಷೇಮಪಾಲಕ ಪ್ರೊ.ಕೃಷ್ಣ ಕಾರಂತ ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ, ಜತೆ ಕಾರ್ಯದರ್ಶಿ ಸ್ವಾತಿ ಆಚಾರ್ಯ ಉಪಸ್ಥಿತರಿದ್ದರು. ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಧೀಶ್ ಉಡುಪ ಸ್ವಾಗತಿಸಿದರು. ಕಾರ್ಯದರ್ಶಿ ನಿರೋಶ್ ಪಿ.ಜಿ. ವಂದಿಸಿದರು. ವಿದ್ಯಾರ್ಥಿನಿ ಶಮಿತಾ ರೈ ಕೆ.ಎಚ್. ಕಾರ್ಯಕ್ರಮ ನಿರ್ವಹಿಸಿದರು.