ವಿವೇಕಾನಂದ ಸಮೂಹ ಸಂಸ್ಥೆಗಳಿಂದ ಸ್ವಾತಂತ್ರ್ಯೋತ್ಸವ – ಏಳು ಸಾವಿರ ಮಂದಿಯ ಮಧ್ಯೆ ಅದ್ಧೂರಿ ಕಾರ್ಯಕ್ರಮ
ಪುತ್ತೂರು: ಅಲ್ಲಿ ದೇಶಪ್ರೇಮದ ಹೊನಲು ಹರಿದಿತ್ತು. ಏಕಕಾಲಕ್ಕೆ ಏಳು ಸಾವಿರ ಮಂದಿಯ ಜಯಘೋಷ. ಬಿಸಿಲೇ ಇರಲಿ, ಮಳೆಯೇ ಬರಲಿ ನಾವಂತೂ ದೇಶದ ಉತ್ಸವವನ್ನು ಆಚರಿಸಿಯೇ ಸಿದ್ಧ ಎನ್ನುವ ಮನೋಭಾವದಿಂದ ಅಷ್ಟೂ ಮಂದಿ ನೆರೆದಿದ್ದರು. ಇದು ಕಂಡುಬಂದದ್ದು ನೆಹರುನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ. ವಿವೇಕಾನಂದ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ೬೯ನೇ ಸ್ವಾತಂತ್ರ್ಯ ದಿನದಲ್ಲಿ ವಿವೇಕಾನಂದ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳು, ಉಪನ್ಯಾಸಕೇತರ ನೌಕರರು, ಆಡಳಿತ ವರ್ಗದವರೆಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿದರು.
ದ್ವಜಾರೋಹಣಗೈದು ಸಂದೇಶ ನೀಡಿದ ವಿದ್ಯಾಭಾರತಿಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ್ ಮಾತನಾಡಿ ದೇಶದ ಘನತೆ ಗೌರವಗಳನ್ನು ಎತ್ತರಕ್ಕೇರಿಸಲು ಪ್ರತಿಯೊಬ್ಬರೂ ದೊಡ್ಡ ದೊಡ್ಡ ಸಾಧನೆಗಳನ್ನೇ ಮಾಡಬೇಕಿಲ್ಲ. ಬದಲಾಗಿ ನಡವಳಿಕೆ, ಸಂವಹನ, ವ್ಯವಹಾರದಂತಹ ಸಣ್ಣ ಸಣ್ಣ ವಿಷಯಗಳಲ್ಲಿ ಉತ್ಕೃಷ್ಟತೆಯನ್ನು ಮೆರೆದರೆ ಸಾಕು. ನನ್ನ ಮತ್ತು ದೇಶದ ಘನತೆ ಬೇರೆಯಲ್ಲ ಅನ್ನುವ ಅರಿವು ನಮ್ಮಲ್ಲಿ ಮೂಡಬೇಕು ಎಂದು ನುಡಿದರು.
ವ್ಯಾಸ, ವಾಲ್ಮೀಕಿಯ ಕಾಲದಿಂದಲೇ ಈ ದೇಶದ ಜನ ರಾಷ್ಟ್ರದ ಗೌರವವನ್ನು ಪ್ರಪಂಚದಾದ್ಯಂತ ಪಸರಿಸಲು ಶ್ರಮ ವಹಿಸಿದ್ದು ಕಂಡುಬರುತ್ತದೆ. ಅದು ಈಗಲೂ ಜಾರಿಯಲ್ಲಿದೆ. ಇತ್ತೀಚೆಗೆ ಇಸ್ರೋದ ವಿಜ್ಞಾನಿಗಳು ಇಂಗ್ಲೆಂಡ್ನ ಐದು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿಕೊಟ್ಟದ್ದು, ಯೆಮನ್ನಲ್ಲಿ ಯುದ್ಧ ನಡೆಯುತ್ತಿದ್ದಾಗ ನಮ್ಮ ದೇಶದ ನಾಗರಿಕರಲ್ಲದೆ ಪ್ರಪಂಚದ ಇತರ ರಾಷ್ಟ್ರಗಳ ಜನರನ್ನೂ ರಕ್ಷಿಸಿದ್ದು, ನಮ್ಮ ವೀರ ಸೈನಿಕರು ಮಯನ್ಮಾರಿಗೂ ನುಗ್ಗಿ ಉಗ್ರವಾದಿಗಳನ್ನು ನಾಶ ಮಾಡಿದ್ದೆಲ್ಲವೂ ದೇಶದ ಕೀರ್ತಿಯನ್ನು ಹೆಚ್ಚಿಸಿದೆ. ಭಾರತದ ಯೋಗಾಸನವಂತೂ ಈಗ ಜಗತ್ಪ್ರಸಿದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಇ ಶಿವಪ್ರಸಾದ್, ನಿರ್ದೇಶಕ ರಾಧಾಕೃಷ್ಣ ಭಕ್ತ, ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಪಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯ ಮಹದೇವ ಶಾಸ್ತ್ರಿ, ವಿವಿಧ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಡಾ.ಲಿಂಗನಗೌಡ ಕುಲಕರ್ಣಿ, ಜೀವನ್ದಾಸ್, ಉದ್ಯಮಿ ಸಂಜೀವ ಶೆಟ್ಟಿ, ಎನ್.ಸಿ..ಸಿ ಆಧಿಕಾರಿ ಕ್ಯಾ.ಡಿ.ಮಹೇಶ್ ರೈ, ವಿವೇಕಾನಂದ ಪದವಿ, ಪದವಿಪೂರ್ವ, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಮತ್ತು ಊರವರು ಹಾಜರಿದ್ದರು.
ಎನ್.ಸಿ.ಸಿ, ರೋವರ್ಸ್ ಅಂಡ್ ರೇಂಜರ್ಸ್ ಅಲ್ಲದೆ ಎನ್.ಎಸ್.ಎಸ್ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿದ್ಯಾರ್ಥಿನಿಯರಿಂದ ದೇಶ ಭಕ್ತಿಗೀತೆ, ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಗಾಯನ ನಡೆಯಿತು. ಪ್ರಾಧ್ಯಾಪಕರಾದ ಡಾ.ಶ್ರೀಶ ಕುಮಾರ್ ಎಂ.ಕೆ, ರೋಹಿಣಾಕ್ಷ ಕಾರ್ಯಕ್ರಮ ನಿರ್ವಹಿಸಿದರು.