ವಾಣಿಜ್ಯ ವಿಭಾಗದ ಅಂತರ್ ತರಗತಿ ಸ್ಪರ್ಧೆ
ಪುತ್ತೂರು: ಅಂತರ್ ತರಗತಿ ಸ್ಪರ್ಧೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರಬರುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲು ಸಹಕಾರಿಯಾಗುತ್ತದೆ. ಮುಂದೆ ಬರಲಿರುವ ಅನೇಕ ಸ್ಪರ್ಧೆಗಳಿಗೆ ಇದು ಸಣ್ಣ ಮಟ್ಟದ ತರಬೇತಿ ಇದ್ದಂತೆ. ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ.ಭಟ್ ಹೇಳಿದರು.
ಅವರು ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ಅಂತರ್ ತರಗತಿ ಸ್ಪರ್ಧೆ-’ವಿವೇಕಾಮ್ ೨೦೧೩–೧೪’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧೆಗಳು ನಿರ್ದಿಷ್ಟ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಬೇರೆ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡುತ್ತವೆ. ಸ್ಪರ್ಧೆಗಳನ್ನು ಕೇವಲ ಅನುಭವಿಸಬೇಕಷ್ಟೇ ಹೊರತು ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಳ್ಳಬಾರದು. ಕ್ರಿಯಾಶೀಲತೆ, ಮ್ಯಾನೇಜ್ಮೆಂಟ್ ಸಾಮರ್ಥ್ಯ ಮತ್ತು ಕ್ರಿಯಾತ್ಮಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡುವಂತೆ ಮಾಡುವಲ್ಲಿ ಸ್ಪರ್ಧೆಗಳ ಪಾತ್ರ ಹಿರಿದು ಎಂದರು.
ವೇದಿಕೆಯಲ್ಲಿ ವ್ಯವಹಾರ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಆನಂದ್ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಶ್ಮಿ ಶರ್ಮ ಪ್ರಾರ್ಥಿಸಿದರು. ವಿದ್ಯಾರ್ಥಿ ಜಗನ್ನಾಥ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪೂಜ ವಂದಿಸಿ ವಿಶಾಖ ಕಾರ್ಯಕ್ರಮ ನಿರೂಪಿಸಿದರು.