ವಿವೇಕಾನಂದದಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ
ಪುತ್ತೂರು: ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಮನೋಭಾವದಿಂದ ಭಾಗವಹಿಸುವುದು ಅವಶ್ಯಕ. ಆಗ ಮಾತ್ರ ಸೋಲ ಗೆಲುವುಗಳನ್ನು ಸಮರ್ಥವಾಗಿ ಎದುರಿಸಲು ಶಕ್ತರಾಗಲು ಸಾಧ್ಯ. ಸ್ಪರ್ಧಿಯೋರ್ವ ಸ್ಪರ್ಧೆಯಲ್ಲಿ ಭಾಗವಹಿಸುವವರ ಸಂಖ್ಯೆಯ ಕುರಿತು ಚಿಂತಾಕ್ರಾಂತನಾಗಬಾರದು. ಬದಲಾಗಿ ಆತ್ಮ ವಿಶ್ವಾಸದಿಂದ ಬಾಗಹಿಸುವುದು ಉತ್ತಮ. ಸ್ಪರ್ಧೆ ಸ್ನೇಹ ಭಾವನೆಯನ್ನು ಹುಟ್ಟು ಹಾಕುವ ವೇದಿಕೆಯಾಗಬೇಕು ಎಂದು ವಿವೇಕಾನಂದ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಹೇಳಿದರು.
ಅವರು ಶನಿವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಅಂತರ್ ಕಾಲೇಜು ಮಟ್ಟದ ಸಾಹಿತ್ಯ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ಕಾಲೇಜು ಇಂದು ಹಲವಾರು ಸಾಧನೆಗಳಿಗೆ ಸಾಕ್ಷಿಯಾಗಿ ಬೆಳೆಯುತ್ತಿದೆ. ಈ ಸಾಧನೆಯ ಹಿಂದೆ ಅದ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಸಹಕಾರ ಅಪಾರವಾದುದು. ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಪದವಿ ಕಾಲೇಜಿಗೆ ಹಿರಿಯಣ್ಣನ ಸ್ಥಾನವಿದ್ದು ಇತರ ಸಂಸ್ಥೆಗಳಿಗೆ ಇಲ್ಲಿನ ಉನ್ನತಿಕೆ ಸ್ಪೂರ್ತಿದಾಯಕವೆನಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ಎಚ್.ಮಾಧವಭಟ್ ಮಾತನಾಡಿ ವಿವೇಕ ಜಯಂತಿಯ ಹಿನ್ನೆಲೆಯೊಡನೆ ಆಯೋಜಿಸಲಾಗಿರುವ ಈ ಕಾರ್ಯಕ್ರಮ ವಿವೇಕಾನಂದರಿಗೆ ನೀಡುವ ಗೌರವದ ಸಂಕೇತ. ಯುವಜನತೆ ಅವರ ಆದರ್ಶಗಳನ್ನು ಅಳವಡಿಸಿ ಕೊಳ್ಳಲು ಇದು ಪ್ರೇರಕ. ಇಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸದೆ ಪಾರದರ್ಶಕತೆ ಉಳಿಸಿಕೊಳ್ಳಲಾಗುತ್ತಿದೆ. ಮಾತ್ರವಲ್ಲದೆ ಕೇವಲ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನಷ್ಟೇ ಆಚರಿಸುವುದರ ಮೂಲಕ ಕಾಲೇಜಿನ ಉದ್ದೇಶ, ನಂಬಿಕೆಯನ್ನು ಎತ್ತಿಹಿಡಿಯಲಾಗುತ್ತಿದೆ ಎಂದು ನುಡಿದರು.
ವಿದ್ಯಾರ್ಥಿನಿಯರಾದ ಶ್ರುತಿ ಹಾಗು ಮೇಘಶ್ರೀ ಪ್ರಾರ್ಥಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟರಮಣ ಭಟ್ ಸ್ವಾಗತಿಸಿ, ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಎಂ.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು