ಸಂಶೋಧನಾ ನಿರತ ಅಧ್ಯಾಪಕರೊಂದಿಗೆ ಸಂವಾದ
ಪುತ್ತೂರು: ಸಂಶೋಧನೆಗೆ ಹೊರಡುವ ಪ್ರತಿಯೊಬ್ಬನಲ್ಲೂ ಆರ್ಥಿಕ ದೃಢತೆಗಿಂತಲೂ ಅನುಭವ ಮುಖ್ಯ. ಸಂಶೋಧನಾ ವಿಷಯ ಯಾವುದೇ ಆಗಿದ್ದರೂ, ಸಾಮಾಜಿಕ ಪ್ರಯೋಜನಕ್ಕಿರಬೇಕು. ಸಂಶೋಧನೆಯಲ್ಲಿ ನಿರತರಾಗುವವರು ಕಾಲ ಕಾಲಕ್ಕೆ ತಮ್ಮ ಜ್ಞಾನದ ಹರವನ್ನು ವಿಸ್ತರಿಸಿಕೊಳ್ಳುತ್ತಿರಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ, ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ವಿ.ವಿ.ಭಟ್ ಹೇಳಿದರು.
ಅವರು ಮಂಗಳವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನೆಯಲ್ಲಿ ನಿರತರಾದ ಅಧ್ಯಾಪಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಕೊಡಚಾದ್ರಿಯ ಜೈವಿಕ ವ್ಯಾಸಂಗ ಮತ್ತು ಕಬ್ಬಿಣದ ಕಂಬದ ಬಗೆಗೆ ನಡೆಸಿದ ಸಂಶೋಧನೆಯ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ, ಟಾಟಾ ಇನ್ಸಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಕಾಸ್ಮಿಕ್ ರೇ ರಿಸರ್ಚ್ ವಿಭಾಗದ ನಿರ್ದೇಶಕ ಡಾ.ಸುನಿಲ್ ಗುಪ್ತ ಮಾತನಾಡಿ, ವಿಷಯಗಳನ್ನು ಆಯ್ದುಕೊಳ್ಳುವಲ್ಲಿ ಸದಾ ಎಚ್ಚರದಿಂದಿರಬೇಕು. ವಿಜ್ಞಾನದ ಯಾವುದೇ ಸಂಶೋಧನೆಗೂ ವಿವಿಧ ಉಪಕರಣಗಳನ್ನು ಬಳಸಬೇಕಾದ ಅವಶ್ಯಕತೆಯಿದೆ ಎಂದರು.
ಇನ್ನೋರ್ವ ಅತಿಥಿ ಟಾಟಾ ಇನ್ಸಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈನ ವಿಜ್ಞಾನಿ ಡಾ.ಎಸ್. ತ್ರಿಪಾಠಿ ಮಾತನಾಡಿ ಸಂಶೋಧನಾ ಉಪಕರಣಗಳ ಬಳಕೆ ಅತಿ ಜಾಗರೂಕತೆಯಿಂದ ಮಾಡಬೇಕು ಮತ್ತು ಬಳಸಬೇಕು ಎಂದರಲ್ಲದೆ ಜೀವಶಾಸ್ತ್ರಜ್ಞನಾದವನು ಸದಾ ಸಂಶೋಧನೆಗಳನ್ನು ಮಾಡುತ್ತಿರಬೇಕು ಎಂದರು.
ಕಾರ್ಯಕ್ರಮವನ್ನು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್,ಮಾಧವ ಭಟ್ ಸ್ವಾಗತಿಸಿ, ವಂದಿಸಿದರು.