ವಿದ್ಯಾರ್ಥಿ ನಡಿಗೆ ಗ್ರಾಮದೆಡೆಗೆ’ ಕಾರ್ಯಕ್ರಮ ಸಮಾರೋಪ – ಕಾಲೇಜು ಸಾಂಸ್ಕೃತಿಕ ಕೇಂದ್ರವಾಗಬೇಕು: ಪ್ರೊ.ವೇದವ್ಯಾಸ ರಾಮಕುಂಜ
ಪುತ್ತೂರು: ಕಾಲೇಜು ಎಂಬುದು ಕೇವಲ ಶೈಕ್ಷಣಿಕ ಕೇಂದ್ರವಾಗಿರದೆ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಬೇಕು. ಹಾಗಾಗಬೇಕಿದ್ದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದೊಂದಿಗೆ ಜೀವನಾನುಭವವೂ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಗ್ರಾಮಗಳ ಬಗೆಗಿನ ಅಧ್ಯಯನ, ಸ್ಪಂದನೆ ವಿದ್ಯಾಥಿಗಳಲ್ಲಿ ಮೂಡಬೇಕು. ಮೂಲ ಭಾರತದ ಕಲ್ಪನೆ ಯುವ ಸಮುದಾಯದಲ್ಲಿ ಬೆಳೆಯಭೇಕು ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ವೇದವ್ಯಾಸ ರಾಮಕುಂಜ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಕಾಲೇಜು ದತ್ತು ಸ್ವೀಕರಿಸಿರುವ ಕುಡಿಪ್ಪಾಡಿ ಗ್ರಾಮದೆಡೆಗೆ ವಿದ್ಯಾರ್ಥಿ ನಡಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ವಿದ್ಯಾರ್ಥಿಗಳು ಗ್ರಾಮದಲ್ಲಿ ನಾನಾ ತೆರಣಾದ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶಗಳಿವೆ. ಇಂಗು ಗುಂಡಿಯಂತಹ ಪ್ರಮುಖ ಜಲ ಸಾಕ್ಷರ ವಿಚಾರಗಳು ಗ್ರಾಮೀಣ ಭಾಗದಲ್ಲಿ ಸಾಕಾರಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಸರ್ಕಾರವನ್ನು ಆಶ್ರಯಿಸುವುದರಿಂದ ಪ್ರಯೋಜನವಾಗದು. ಪರಿಸರದಲ್ಲಿಯೇ ನೀರನ್ನು ಹೆಚ್ಚಿಸುವಲ್ಲಿ ಯುವ ಜನತೆ ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರು.
ಶಿಕ್ಷಣದ ನಿಜವಾದ ಅರ್ಥ ಅಡಗಿರುವುದು ಸಮಾಜಸೇವೆಯಲ್ಲಿ. ಈ ಕಾರಣದಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜಮುಖಿ ಚಿಂತನೆಯಲ್ಲಿ ತೊಡಗಿಕೊಳ್ಳಬೇಕು. ಸಮಾಜದಿಂದಾಗಿ ನಾನು ಎಂಬ ಸುಜ್ಞಾನವನ್ನು ಬೆಳೆಸಿಕೊಳ್ಳಬೇಕು. ಬಡವರಿಗೆ ಸಹಾಯ ನಮ್ಮೆಲ್ಲರ ಆದ್ಯತೆಯಾಗೇಕು. ಗಿಡ ನೆಡುವಿಕೆ ಸಂಕಲ್ಪವಾಗಬೇಕು. ಈ ಎಲ್ಲಾ ಚಟುವಟಿಕೆಗಳಿಗೆ ಗ್ರಾಮ ಮಟ್ಟದಲ್ಲಿ ಅಪಾರ ಅವಕಾಶಗಳಿವೆ ಎಂದು ತಿಳಿಸಿದರು.
ದಿಕ್ಸೂಚಿ ಭಾಷಣ ಮಾಡಿದ ವಿವೇಕಾನಂದ ಖಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಚಿಂತನೆ ನಮ್ಮಿಂದ ದೂರವಾಗುತ್ತಿದೆ. ಆಡಳಿತ ವ್ಯವಸ್ಥೆಗಳು ಉದ್ಯಮಪತಿಗಳ ಮುಷ್ಠಿಗೆ ಸಿಲುಕಿವೆ. ಹಾಗಾಗಿ ಸ್ವಾತಂತ್ರ್ಯಾನಂತರದ ಭಾರತದಲ್ಲಿ ವಾಣಿಜ್ಯ ವ್ಯವಹಾರಗಳಿಗೆ ಪೂರಕವಾದ ಚಿಂತನೆಗಳೇ ಬೆಳೆದು ಬಂದು ಗ್ರಾಮೀಣ ಬದುಕು ಕಡೆಗಣಿಸಲ್ಪಟ್ಟಿದೆ. ಇಂದುಲ್ಲಾ ಕ್ಷೇತ್ರಗಳಲ್ಲೂ ಉತ್ಪಾದಕನೇ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡುತ್ತಿದ್ದರೆ ರೈತ ಮಾತ್ರ ತನ್ನ ಉತ್ಪನ್ನಕ್ಕೆ ಬೇರೆಯವರಿಂದ ಬೆಲೆ ಕಟ್ಟಿಸಿಕೊಳ್ಳಬೇಕಾದ ದುಸ್ಥಿತಿಯಲ್ಲಿದ್ದಾನೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಗ್ರಾಮೀಣ ಪರಿಸರಕ್ಕೆ ಸೇವಾಕಾಂಕ್ಷಿಗಳಾಗಿ ಬಂದಿರುವುದು ಬಹು ದೊಡ್ಡ ಸಂಗತಿ. ಹಳ್ಳಿಯ ಮಂದಿಯೊಂದಿಗೆ ಬೆರೆತು ಕೆಲಸ ಮಾಡುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.
ಕುಡಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ, ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ರಾಮ ಜೋಯಿಸ್, ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಚಂದ್ರಮತಿ, ಕುಡಿಪಾಡಿ ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್, ಕಬಕ ಪಂಚಾಯತ್‌ನ ಮಾಜಿ ಅಧ್ಯಕ್ಷ ಶಾಬಾ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಅಧ್ಯಕ್ಷ ಸುಕುಮಾರ ಎನ್.ಎಸ್ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ವಂದಿಸಿದರು. ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ.ರೋಹಿಣಾಕ್ಷ ಹಾಗೂ ಗಾಮ ಪಂಚಾಯತ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಎರಡೂವರೆ ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಈ ಬೃಹತ್ ಜಾಥಾದಲ್ಲಿ ಭಾಗಿಯಾದರು.